ಆದರ್ಶ ಶಿಕ್ಷಕರ...

ಆದರ್ಶ ಶಿಕ್ಷಕರೆಂದರೆ ಯಾರು? ‘Do not sit like a Rock, Do work as a Clock’

727
0
SHARE

ಸೆಪ್ಟೆಂಬರ್ 5 ಬಂದರೆ ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವಷ್ಟೇ. ಎಷ್ಟೋ ಸಂವತ್ಸರಗಳು ಉರುಳಿದರೂ ಇಂದಿಗೂ ಕೂಡ ಆದರ್ಶ ಶಿಕ್ಷಕ ಎಂದರೆ ರಾಧಾಕೃಷ್ಣನ್ ಅವರ ಹೆಸರು ಅಥವಾ ದಶಕಗಳ ಹಿಂದಿನ ಧೋತಿ ಉಟ್ಟಕೊಂಡು ಬರುತ್ತಿದ್ದ ಮೇಷ್ಟ್ರುಗಳ ಹೆಸರು ನೆನಪಿಗೆ ಬರುತ್ತವೆಯೇ ಹೊರತು ಇಂದಿನ ಕಾಲದ ಶಿಕ್ಷಕರು ನೆನಪಿಗೆ ಏಕೆ ಬರುತ್ತಿಲ್ಲ? ಶಿಕ್ಷಕರ ಜೀವನವಿಧಾನ, ಪಾಠ ಮಾಡುವ ಧರತಿ ಎಲ್ಲ ಬದಲಾಗಿರಬಹುದು, ಆದರೆ ಇಡೀ ನಾಡೇ ತಲೆಯೆತ್ತಿ ನೋಡುವಂಥ ಮೇಷ್ಟ್ರುಗಳೇಕೆ ಹುಟ್ಟುತ್ತಿಲ್ಲ?
ಗುರು ಪರಂಪರೆಯ ನಮ್ಮ ದೇಶದಲ್ಲಿ ಗುರುಗಳು ಯಾವಾಗಲೂ ಇತರರಿಗೆ ಆದರ್ಶವಾಗಿರಬೇಕು ಎಂದು ಸಮಾಜ ಬಯಸುತ್ತದೆ. ಇಪ್ಪತ್ತು ವರ್ಷದ ಹಿಂದೆ ಗುರುವಿಗೆ ಅದೇ ರೀತಿಯ ಮಹತ್ವ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗುರುವಿನ ಬಗ್ಗೆ ಮೊದಲಿದ್ದಷ್ಟು ಗೌರವ ಸಮಾಜಕ್ಕೆ ಇಲ್ಲ ಮತ್ತು ಅದು ಕಡಿಮೆಯಾಗುತ್ತಾ ಇದೆ. ಇದು ನಿಜಕ್ಕೂ ದುರದೃಷ್ಟಕರ. ಸಮಾಜ ಸಹಾ ಹಿಂದೆ ಇದ್ದ ಗುರುವಿನಂತೆ ಈಗಿನ ಶಿಕ್ಷಕರು ಇರಬೇಕೆಂದು ಅಪೇಕ್ಷೆ ಮಾಡುವುದು ಸೂಕ್ತವಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಮೂಲಾಗ್ರ ಬದಲಾವಣೆ ಆಗುತ್ತಿದೆ ಅದರಂತೆ ಶಿಕ್ಷಣ ಕ್ಷೇತ್ರವೂ ಬದಲಾಗುತ್ತಾ ಇದೆ. ಅದಕ್ಕೆ ತಕ್ಕಂತೆ ಗುರುವಿನ ಕಾರ್ಯನಿರ್ವಹಣೆ ಕೂಡ ಬದಲಾಗಿದೆ.
ಹಿಂದಿನ ಗುರುಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಮಾದರಿಯಾಗಿರುತ್ತಿದ್ದರು. ಆದರೆ ಇಂದಿನ ಕೆಲವು ಗುರುವನ್ನು ಮಾದರಿಯಾಗಿರಿಸಿಕೊಂಡರೆ ಅದಕ್ಕಿಂತ ದುರಂತ ಇನ್ನೊಂದಿರಲಿಕ್ಕಿಲ್ಲ. ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಸಮುದಾಯ ಶಿಕ್ಷಕವರ್ಗದಿಂದ ನಿರೀಕ್ಷಿಸುವ ಅಂಶಗಳು, ಶಿಕ್ಷಕರು ಇರುವ ರೀತಿ ಈ ಬಗ್ಗೆ ಅವಲೋಕಿಸ ಬೇಕಾದ ಅಗತ್ಯವಿದೆ.

ಮಕ್ಕಳಿಗೆ ಉತ್ತಮ ನೀತಿಯನ್ನು ತಿಳಿಸಬೇಕಾದ ಎಲ್ಲರೂ ಮೊದಲು ತಾವು ವಯ್ಯಕ್ತಿಕವಾಗಿ ನೈತಿಕವಾಗಿರಬೇಕು. ಅದು ಹಿಂದಿನ ಶಿಕ್ಷಕರಲ್ಲಿ ಇತ್ತು ಅವರಿಗೆ ಸಮಾಜದ ಬಗ್ಗೆ ಗೌರವ ಇತ್ತು. ಇಂದು ಶಿಕ್ಷಕ ಹುದ್ದೆ ಕೊಡುಕೊಳ್ಳುವ ವ್ಯವಹಾರಕ್ಕೆ ಸೀಮಿತವಾಗಿದೆ. ಶಿಕ್ಷಕರ ವೈಯಕ್ತಿಕ ಜೀವನ ತೆರೆದ ಪುಸ್ತಕದಂತೆ ಇರಬೇಕು. ಅದು ಉಳಿದಿವರಿಗೆ ಮಾದರಿಯಾಗಬೇಕು. ಇಂದಿನ ಶಿಕ್ಷಕರು ಹೇಳುವುದೇನು ಗೊತ್ತೆ? ಶಾಲಾ ಅವಧಿಯಲ್ಲಿ ನಾನು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವೆ, ಉಳಿದ ಅವಧಿ ಅದು ನನ್ನ ವೈಯಕ್ತಿಕ. ಅದನ್ನು ಪ್ರಶ್ನಿಸುವುದಕ್ಕೆ ನೀವ್ಯಾರು ಅನ್ನುತ್ತಾರೆ! ಸಾರ್ವಜನಿಕ ವ್ಯಕ್ತಿ ಯಾರೇ ಆದರೂ ಅವರು ಮೊದಲು ವೈಯಕ್ತಿಕವಾಗಿ ನೈತಿಕರಾಗಿರಬೇಕಾದ ಅಗತ್ಯವಿದೆ. ಕಾರ್ಯನಿರ್ವಹಿಸುವ ವೇಳೆಗೆ ಮಾತ್ರ ನಾವು ಬದ್ದರಾದರೆ ಅದು ಒಂದು ವ್ಯವಹಾರವೇ ವಿನಾ ಸೇವೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಈ ರೀತಿಯ ಬದಲಾವಣೆಗಳು ಆಗುತ್ತಾ ಇದ್ದರೂ ನಮ್ಮ ದೇಶದಲ್ಲಿ ಇನ್ನೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಇದ್ದಾರೆ ಎಂಬುದು ಸಮಾಧಾನದ ಸಂಗತಿ. ಸಂಪೂರ್ಣ ಶಿಕ್ಷಣ ವ್ಯವಸ್ಥೆಯೇ ವ್ಯವಹಾರಿಕವಾಗಿ ಕಾರ್ಯನಿರ್ವಹಿಸುತ್ತಿರುವಾಗ, ಶಿಕ್ಷಕರು ಯಾರು ಉತ್ತಮರು ಎಂದು ಹಿಂದಿನ ಗುರುಗಳಿಗೆ ಹೋಲಿಸಿ ಹೇಳುವುದಕ್ಕಿಂತ ಸದ್ಯದಲ್ಲಿ ಕೆಲವು ಶಿಕ್ಷಕರಲ್ಲಿ ಕಂಡು ಬರುತ್ತಿರುವ ಗುಣ ಮತ್ತು ವರ್ತನೆಗಳನ್ನು ಈ ಕೆಳಗೆ ನೀಡಲಾಗಿದೆ. ಯಾರು ಆದರ್ಶ ಉತ್ತಮ ಶಿಕ್ಷಕರು ಎಂಬುದನ್ನು ಅವರವರ ವಿವೇಚನೆಗೆ ಬಿಡಲಾಗಿದೆ.

ಯಾರು ಆದರ್ಶ ಶಿಕ್ಷಕ?
 ಶಾಲೆ ಇರುವ ಊರಿನಲ್ಲಿ ಇರುವವರು.
 ನನ್ನ ಸೇವೆ ಸರ್ಕಾರಿ ಶಾಲೆಗೆ, ನನ್ನ ಮಕ್ಕಳು ಕಾನ್ವೆಂಟಿಗೆ ಎನ್ನುವವರು.
 ಶಿಕ್ಷಕ ವೃತ್ತಿಯೊಂದೆ ಉದ್ಯೋಗ ಅಂದ್ಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿರುವರು.
 ಶಿಕ್ಷಕ ವೃತ್ತಿ ಜೊತೆಗೆ ಬಡ್ಡಿ ವ್ಯವಹಾರ, ಕಲ್ಲು ಕಣಿ, ಕಟ್ಟಿಗೆ ವ್ಯವಹಾರ, ಗುತ್ತಿಗೆ ಕಾರ್ಯ, ಹೆಂಡದ ವ್ಯಾಪಾರ ಇವೆಲ್ಲವು ಇರುವುದು.
 ಯಾವುದೇ ಯೋಜನೆಯನ್ನು ಯಶಸ್ವಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತಿಸುವರು.
 ಏನೇ ಯೋಜನೆ ಬಂದರೂ ದಾಖಲೆಯಲ್ಲಿ ಯಶಸ್ವಿಗೊಳಿಸಿ ಕೊಡುವರು.
 ದಿನನಿತ್ಯ ಅಧಿಕಾರಿಗಳ/ಜನಪ್ರತಿನಿಧಿಗಳ ಬಾಲಬಡಿಯುತ್ತಾ ಅವರ ಹಿಂದೆ ಓಡಾಡುತ್ತಿರುವರು.
 ತನ್ನ ಕಾರ್ಯದಿಂದ ಏನಾದರೂ ಪ್ರಯೋಜನ ಆಗಬೇಕು ಎಂದು ಬಯಸುವರು.
 ಪ್ರತಿ ತಿಂಗಳು ವೇತನ ಬಂದರೆ ಸಾಕು. ಯಾರು ಏನಾದರೂ ಹಾಳಾಗಿಹೋಗಲಿ ಎಂಬ ಬಾವನೆ ಇರುವವರು.
 ಶಾಲಾ ಅವಧಿಯ ಜೊತೆಗೆ ಬೇರೆ ಅವಧಿಯಲ್ಲಿಯೂ ದೈಹಿಕವಾಗಿ ಅಥವಾ ಮಾನಸಿಕವಾಗಿ ಶಾಲೆಯೊಂದಿಗೆ ಇರುವರು.
 ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಬಂದರೂ ಮಾನಸಿಕವಾಗಿ ಶಾಲೆಯೊಂದಿಗೆ ಇರದವರು.
 ಮಕ್ಕಳ ಬಿಸಿಯೂಟ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸುವವರು.
 ಮಕ್ಕಳ ಬಿಸಿಯೂಟದೊಂದಿಗೆ ತಾವು ಹೊಟ್ಟೆ ತುಂಬ ಊಟ ಮಾಡುವವರು.
 ಶಿಕ್ಷಕರ ಬಿಸಿಯೂಟ ಯೋಜನೆ ಎಂದು ತಪ್ಪಾಗಿ ಅರ್ಥೈಸಿಕೊಂಡವರು.

ಮಹಾ ದಾರ್ಶನಿಕನಿಗೆ ನುಡಿ ನಮನ

ಭಾರತ ದೇಶದ ಬಡ ಕುಟುಂಬದಲ್ಲಿ ಜನಿಸಿ ಇಚ್ಚಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನ ಶಕ್ತಿ ಇದ್ದರೆ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ ನಮ್ಮ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಮತ್ತು ಭಾರತ ಕಂಡ ಮೊದಲ ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್.

ಶಿಕ್ಷಕರೆಡೆಗೆ ಅಪಾರ ಗೌರವ, ಪ್ರೀತಿ. ನಿಷ್ಠೆ ಹೊಂದಿದ್ದ, ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರು. ಅಂತಲೇ, ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಕುರಿತಾದ ಒಂದು ಇಣುಕುನೋಟ.

ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5, 1888ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.
ತಂದೆ ಸರ್ವಪಲ್ಲಿ ವೀರಸ್ವಾಮಿ ಅವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟವಾದ ಸಂದರ್ಭದಲ್ಲಿ ರಾಧಾಕೃಷ್ಣನ್ಗೆ ಓದಬೇಕೆನ್ನುವ ಅಪಾರ ಹಂಬಲ, ಸ್ಕಾಲರ್ಶಿಪ್ ಹಣದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್ನಲ್ಲಿ ‘ತತ್ವಜ್ಞಾನ’ ವಿಷಯದ ಮೇಲೆ ಬಿ.ಎ ಮತ್ತು ಎಂ.ಎ. ಪದವಿಯನ್ನು ಸಂಪಾದಿಸಿಕೊಂಡರು.

ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ ‘ದಿ ಎಥಿಕ್ಸ್ ಆಫ್ ವೇದಾಂತ್’ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ ಸಿದ್ಧಾಂತ, ವೇದಾಂತ ವಿಚಾರಗಳು ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.

ವೆಲ್ಲೂರಿನಲ್ಲಿರುವಾಗಲೇ ಕೇವಲ 16ನೇ ವಯಸ್ಸಿನಲ್ಲಿ ಶಿವಕಾಮುಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು.
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೂಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, ‘ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್’ ಎಂಬ ಮೊದಲ ಪುಸ್ತಕ ಬರೆದರು.

ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ ‘ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್’ ಮತ್ತು ‘ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ’ ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ.

ಎನ್ನುವ ಮಾತಿಗೆ ಉತ್ತಮ ನಿದರ್ಶನವಾದ ರಾಧಾಕೃಷ್ಣನ್, ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ‘ಧರ್ಮ ಮತ್ತು ನೀತಿಶಾಸ್ತ್ರ’ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.
1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.

1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

Article by

ಶ್ರೀನಿವಾಸ್ ಗೌಡ