ಕಾದಂಬರಿ ನೃತ್ಯ...

ಕಾದಂಬರಿ ನೃತ್ಯೋತ್ಸವದಲ್ಲಿ ಶೀತಲ ಗಾಳಿ

49
0
SHARE

ಮಾರ್ಚ್ ತಿಂಗಳಲ್ಲಿ ಶೀತಲ ಗಾಳಿಯೇ ಎಂದು ನಿಮಗೆ ಆಶ್ಚರ್ಯವಾಗಬಹುದು. ಇದು ಶೀತಲ್ ಹೇಮಂತ್ ರವರ ನೃತ್ಯ ಕಾರ್ಯಕ್ರಮವನ್ನು ನೋಡಿದಾಗ ನಮ್ಮ ಮನಸ್ಸಿಗೆ ಬಂದ ಮಾತು. ಶೀತಲ್ ಹೇಮಂತ್ ಉದಯೋನ್ಮುಖ ಯುವ ಪ್ರತಿಭೆ. ಕಲಾ ಕುಟುಂಬದ ಅಂಗಳದಲ್ಲಿ ಅರಳಿ ತನ್ನ ಕಲಾ ಘಮಲನ್ನು ಎಲ್ಲೆಡೆ ಪಸರಿಸುತ್ತಾ ಕಲಾರಸಿಕರನ್ನು ತನ್ನ ನೃತ್ಯ ಹಾಗೂ ಹಾಡುಗಾರಿಕೆಯ ಮೂಲಕ ಸೆಳೆಯುತ್ತಿರುವ ಕನ್ನಡನಾಡಿನ ಆಶಾಕುಸುಮ.

ಚೈತನ್ಯದ ಚಿಲುಮೆಯಂತೆ ಸದಾ ಲವಲವಿಕೆಯಿಂದಿರುವ ಶೀತಲ್ ಗೆ ಮನೆಯಲ್ಲಿನ ವಾತಾವರಣವೇ ಕಲಾಮಯವಾಗಿದ್ದುದರಿಂದಲೋ ಏನೋ ಬಹಳ ಸಣ್ಣ ವಯಸ್ಸಿನಿಂದಲೂ ನೃತ್ಯ ಮತ್ತು ಸಂಗೀತದಲ್ಲಿ ಅತೀವವಾದ ಆಸಕ್ತಿ. ತಾತ, ಅಜ್ಜಿ, ತಂದೆ, ಅತ್ತೆ ತಾಯಿ ಎಲ್ಲರೂ ಸಂಗೀತಗಾರರೇ ಆದಾಗ ಆ ಸಂಗೀತಮಯ ವಾತಾವರಣ ನಮಗೇ ಗೊತ್ತಿಲ್ಲದಂತೆ ಹೇಗೆ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ ಎಂಬುದಕ್ಕೆ ಶೀತಲ್ ಒಂದು ಉದಾಹರಣೆ.

೦೯.೦೩.೨೦೧೭ ರಂದು ನಗರದ ಹೆಚ್.ಬಿ.ಆರ್. ಬಡಾವಣೆಯ ಕಾದಂಬರಿ ಕಲಾಕ್ಷೇತ್ರದ ಆಶ್ರಯದಲ್ಲಿ ನಡೆದ ಮಾಸಿಕ ಕಾದಂಬರಿ ನೃತ್ಯೋತ್ಸವದಲ್ಲಿ ಶೀತಲ್ ತಮ್ಮ ಸೊಲೋ ನೃತ್ಯ ಪ್ರದರ್ಶನವನ್ನು ನೀಡಿದರು. ತುಂಬಿದ ಸಭೀಕರೆದುರು ತನ್ನ ಉತ್ಸಾಹಭರಿತ ನಾಟ್ಯದ ಅಧಿಧೈವವಾದ ಶಿವನ ಕುರಿತಾದ ಒಂದು ಜಿ.ಗುರುಮೂರ್ತಿ ವಿರಚಿತ ವಿದ್ವಾನ್ ಬಾಲಸುಬ್ರಮಣ್ಯ ಶರ್ಮ ರವರ ಸಂಗೀತ ಹಾಗೂ ಸುಶ್ರಾವ್ಯವಾದ ಕಂಠಸಿರಿಯಲ್ಲಿದ್ದ ರಾಗಮಾಲಿಕೆ ಹಾಗೂ ಆದಿತಾಳದ ಶಿವ ಪದಂ ಮೂಲಕ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು. ತಾಂಡವ-ಲಾಸ್ಯಗಳ ಸಮರ್ಪಕ ಮೇಳೈಸುವಿಕೆಯಂತಿದ್ದ ಶಿವಪದಂ ಒಬ್ಬ ಭರತನಾಟ್ಯ ನೃತ್ಯಗಾರ್ತಿಗೆ ತನ್ನ ನೃತ್ತ ಹಾಗೂ ಅಭಿನಯದ ಮೇಲಿರಬೇಕಾದ ಬಿಗಿತಕ್ಕೆ, ಹಿಡಿತಕ್ಕೆ ಸಾಕ್ಷಿ ಎಂಬಂತಿತ್ತು. ಇಲ್ಲಿ ಸುಂದರ ಅಡವುಗಳಿಗೆ(ಹೆಜ್ಜೆ), ಮನೋಹರ ಭಂಗಿಗಳಿಗೆ ಯತೇಚ್ಛವಾದ ಅವಕಾಶವಿತ್ತು. ಸಂಚಾರಿಯ ಭಾಗವಾಗಿ ಮೂಡಿ ಬಂದ ಸಮುದ್ರ ಮಂಥನದ ಕಥೆಯನ್ನು ಬಹಳ ಸೂಚ್ಯವಾಗಿ ಆದರೆ ಅಷ್ಟೇ ಸಹಜವಾಗಿ ಎಲ್ಲರಿಗೂ ಅರ್ಥವಾಗುವಂತೆ ಶೀತಲ್ ರವರು ತಮ್ಮ ಅಭಿನಯದ ಮೂಲಕ ಬಿಂಬಿಸಿದ ಪರಿ ಬಹಳ ಸೊಗಸಾಗಿತ್ತು.

ತಮ್ಮ ಮುಂದಿನ ಪ್ರಸ್ತುತಿಗಾಗಿ ಶೀತಲ್ ಹೇಮಂತ್ ಪುರಂದರದಾಸರ ಒಂದು ಸೊಗಸಾದ ಕೃಷ್ಣನ ಕುರಿತಾದ ’ಆಡ ಹೋದಲ್ಲಿ ಮಕ್ಕಳು’ ದೇವರನಾಮವನ್ನು ಆಯ್ಕೆ ಮಾಡಿದ್ದದ್ದು ಅವರ ವಯಸ್ಸು ಮತ್ತು ಅಭಿನಯದ ಪ್ರೌಢಿಮೆಗೆ ಬಹಳ ಸೂಕ್ತವೆಂಬಂತಿತ್ತು. ಪುಟ್ಟ ಕೃಷ್ಣ ತನ್ನ ಬಾಲಭಾಷೆಯಲ್ಲಿ ಆಡಲು ಹೊರಗೆ ಹೋದಾಗ ಹೇಗೆ ತನ್ನ ಗೆಳೆಯರೆಲ್ಲ ತನ್ನನ್ನು ನೋಡಿ ಅಣಕಿಸುತ್ತಿದ್ದರು ಎಂಬ ಮುದ್ದಾದ ಕಲ್ಪನೆಯನ್ನು ಅಷ್ಟೇ ಮುದ್ದಾಗಿ ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾದರು ಶೀತಲ್. ಬಹಳ ಚಿಕ್ಕ ವಯಸ್ಸಿನಲ್ಲೇ ಈಕೆ ತನ್ನ ಸಂಗೀತ ಹಾಗೂ ನೃತ್ಯದ ಮೇಲಿನ ಪ್ರೀತಿಯಿಂದ ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಯಶಸ್ವಿಯಾಗಿ ಕಲಾಪ್ರದರ್ಶನವಿತ್ತು ಅಪಾರ ಜನಮನ್ನಣೆ ಗಳಿಸಿದ್ದಾರೆ.

ಬೆಂಗಳೂರಿನ ಎಂ. ಇ. ಎಸ್. ಕಾಲೇಜಿನಲ್ಲಿ ಬಿ. ಕಾಂ. ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ನೃತ್ಯದಲ್ಲಿ ವಿದ್ವತ್ ಪರೀಕ್ಷೆಯ ತಯಾರಿಯಲ್ಲಿದ್ದಾರೆ. ಅನೇಕ ಸ್ಪರ್ಧೆಗಳಲ್ಲಿ ಗೆದ್ದು ಬಂದಿದ್ದಲ್ಲದೆ ಅನೇಕ ಬಿರುದುಗಳನ್ನು ಸಾಧಿಸಿದ್ದಾರೆ. ’ಮಿಸ್. ಎಂ. ಇ. ಎಸ್. ’, ’ನಾಟ್ಯ ಶಾರದೆ’, ’ಲಾಸ್ಯ ಮೋಹಿನಿ’, ’ನೃತ್ಯ ಮಣಿ’ ಮತ್ತು ಶೀತಲ್ ಗೆ ಸಂದ ಕೆಲವು ಬಿರುದುಗಳು.

ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ತಾಯಿಯೂ ನೃತ್ಯ ಗುರುವೂ ಆದ ಗುರು ಶ್ರೀಮತಿ ಪದ್ಮ ಹೇಮಂತ್ ರವರ ಪಾಠಾಂತರ ಮತ್ತು ಮಾರ್ಗದರ್ಶನದಲ್ಲಿ ಒಳ್ಳೆಯ ಭರತನಾಟ್ಯ ಕಲಾವಿದೆಯಾಗುತ್ತಿರುವ ಶೀತಲ್ ಹೇಮಂತ್ ಗುರು ತಿರುಮಲೈ ಶ್ರೀನಿವಾಸ್ ಮತ್ತು ಸಂಗೀತ ನಿರ್ದೇಶಕರೂ ವೈಲಿನ್ ವಾದಕರೂ ಆದ ತಮ್ಮ ತಂದೆ ಬಿ.ಆರ್. ಹೇಮಂತ್ ಕುಮಾರ್ ರವರ ಗರಡಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ತಾಲೀಮು ನಡೆಸುತ್ತಿದ್ದಾರೆ. ಇಂಥ ಯುವ ಪ್ರತಿಭೆಗಳು ಸಾವಿರ ಸಂಖ್ಯೆಯಲ್ಲಿ ಬೆಳೆಯಲಿ, ಶೀತಲ್ ಹೇಮಂತ್ ರವರ ಕನಸುಗಳೆಲ್ಲ ನನಸಾಗಲಿ. ಕಲಾ ಕ್ಷೇತ್ರದಲ್ಲಿ ಈಕೆಯ ಪಯಣ ಸಾಂಗವಾಗಿ ನೆರವೇರಲಿ ಎಂದು ನಾವೆಲ್ಲರೂ ಹರಸೋಣ.