‘ನೋಟದಾಗೆ ನಗೆಯ...

‘ನೋಟದಾಗೆ ನಗೆಯಾ ಮೀಟುವ’ ‘ದೊಡ್ಡ’ ರಂಗೇಗೌಡರು

147
1
SHARE

‘ನೋಟದಾಗೆ ನಗೆಯಾ ಮೀಟುವ’ ‘ದೊಡ್ಡ’ ರಂಗೇಗೌಡರು

ದೊಡ್ಡರಂಗೇಗೌಡರ ಬದುಕು ಸುಂದರವಾಗಿರಲಿ ಎಂದು ಹಾರೈಸುತ್ತಾ ಅವರಿಗೆ ತುಂಬು ಹೃದಯದ ಗೌರವಪೂರ್ವಕ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸೋಣ. . . . ! ! !

ಮಹಾನ್ ವಿದ್ವಾಂಸ, ಕವಿ, ಪ್ರಾಧ್ಯಾಪಕ, ಚಲನಚಿತ್ರ ಸಾಹಿತಿ, ಉಪನ್ಯಾಸಕ ಹೀಗೆ ಹಲವು ರೀತಿಯಲ್ಲಿ ಶೋಭಾಯಮಾನರಾಗಿ ಕನ್ನಡ ನಾಡಿನಲ್ಲಿ ಪ್ರಕಾಶಮಾನರಾಗಿದ್ದು, ಇವೆಲ್ಲ ಗುಣಗಳನ್ನೂ ಸವಿಪಾಕವಾಗಿ ಎಂಬಂತೆ ಸರಳ ಸಜ್ಜನಿಕೆಯಲ್ಲಿ ಬೆಸೆದಂತಿರುವ ನಮ್ರತೆಯ ಹಿರಿಯ ಚೇತನರು ದೊಡ್ಡರಂಗೇಗೌಡರು.

ಸಾಹಿತ್ಯ, ಚಲನಚಿತ್ರ, ಜಾನಪದ, ಸುಗಮ ಸಂಗೀತ ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಕವಿ ದೊಡ್ಡರಂಗೇಗೌಡರು ಹುಟ್ಟಿದ್ದು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕುರುಬರ ಹಳ್ಳಿಯಲ್ಲಿ ಫೆಬ್ರವರಿ 7ರ 1946ರಲ್ಲಿ. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಕೆ. ರಂಗೇಗೌಡರು, ತಾಯಿ ಅಕ್ಕಮ್ಮ. ಪ್ರಾರಂಭಿಕ ಶಿಕ್ಷಣ ಕುರುಬರಹಳ್ಳಿ, ಬಡವನ ಹಳ್ಳಿ, ಮಧುಗಿರಿ, ತುಮಕೂರುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ ಪದವಿ (1970), ಮತ್ತು 1972ರಲ್ಲಿ ಎಂ.ಎ. ಪದವಿ. “ಕನ್ನಡ ನವೋದಯ ಕಾವ್ಯ: ಒಂದು ಪುನರ್ ಮೌಲ್ಯ ಮಾಪನ” ಎಂಬ ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಬೋಧಕ ವೃತ್ತಿಗೆ ಸೇರಿದ್ದು 1979ರಲ್ಲಿ ಬೆಂಗಳೂರಿನ ಎಸ್.ಎಲ್.ಎನ್ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಧ್ಯಾಪಕರಾಗಿ, 1980ರಿಂದ ಪ್ರವಾಚಕರಾಗಿ, 1985 ರಿಂದ ಕನ್ನಡ ವಿಭಾಗದ ಮುಖ್ಯಸ್ಥರಾಗಿ 1990ರಿಂದ ಪ್ರಾಧ್ಯಾಪಕರಾಗಿ 2002ರಲ್ಲಿ ನಿವೃತ್ತಿ. ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಕಥೆ, ಕವನಗಳನ್ನು ರಚಿಸುತ್ತಾ ಬಂದಿರುವ ದೊಡ್ಡರಂಗೇಗೌಡರು ಕಾವ್ಯ, ಪ್ರವಾಸಕಥನ, ವಿಮರ್ಶಾಕೃತಿಗಳು, ಭಾವಗೀತೆಗಳ ಕೃತಿಗಳನ್ನು ಪ್ರಕಟಿಸಿರುವುದರ ಜೊತೆಗೆ ಸುಮಾರು 500ಕ್ಕೂ ಹೆಚ್ಚು ಚಲನ ಚಿತ್ರಗೀತೆಗಳನ್ನು ಬರೆದಿದ್ದಾರೆ.

ಜಗಲಿ ಹತ್ತಿ ಇಳಿದು, ಕಣ್ಣು ನಾಲಗೆ ಕಡಲು, ನಾಡಾಡಿ, ಮೌನಸ್ಪಂದನ, ಮೊದಲಾದ 15 ಕಾವ್ಯ ಕೃತಿಗಳು; ಹಿಮಶ್ವೇತಾ, ಮಯೂರ ದರ್ಶನ, ಚಂದ್ರಗಿರಿ ದರ್ಶನ, ಸಾಧನ ಸಿರಿ ಮೊದಲಾದ ರೂಪಕಗಳು; ಅನನ್ಯನಾಡು , ಪಿರಮಿಡ್ಡುಗಳ ಪರಿಸರದಲ್ಲಿ ಮುಂತಾದ ಪ್ರವಾಸ ಕಥನಗಳು; ಸಿದ್ಧೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ ಮೊದಲಾದ ೪ ಭಕ್ತಿಗೀತೆಯ ಕೃತಿಗಳು; ಪ್ರೀತಿ ಪ್ರಗಾಥ, ಹಳ್ಳಿ ಹುಡುಗಿ ಹಾಡು-ಪಾಡು ಮೊದಲಾದ ಪ್ರಗಾಥಗಳು; ವರ್ತಮಾನದ ವ್ಯಂಗ್ಯದಲ್ಲಿ, ವಿಚಾರವಾಹಿನಿ, ವಿಶ್ವಮುಖಿ ಮೊದಲಾದ ಗದ್ಯ ಕೃತಿಗಳು; ಮುಕ್ತಕಗಳೂ ಸೇರಿ ಒಟ್ಟು 80 ಕ್ಕೂ ಹೆಚ್ಚು ಕೃತಿ ಪ್ರಕಟಿತ. 1977ರಿಂದಲೂ ಚಲನ ಚಿತ್ರಗಳಿಗೆ ಗೀತೆ ರಚಿಸುತ್ತಾ ಬಂದಿರುವ ದೊಡ್ಡ ರಂಗೇಗೌಡರು 500ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿದ್ದಾರೆ. ಹತ್ತು ಚಿತ್ರಗಳಿಗೆ ಸಂಭಾಷಣೆ, 100ಕ್ಕೂ ಹೆಚ್ಚು ದೂರದರ್ಶನ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ. ಸುಮಾರು 70ಕ್ಕೂ ಹೆಚ್ಚು ಧ್ವನಿ ಸುರುಳಿಗಳು ಹೊರ ಬಂದಿವೆ. ಚಿತ್ರಗೀತೆ ರಚಿಸಿರುವ ಪ್ರಖ್ಯಾತ ಚಲನಚಿತ್ರಗಳೆಂದರೆ ಪಡುವಾರಹಳ್ಳಿ ಪಾಂಡವರು, ಪರಸಂಗದ ಗೆಂಡೆತಿಮ್ಮ, ಬಂಗಾರದ ಜಿಂಕೆ, ಅಶ್ವಮೇಧ, ಜನುಮದ ಜೋಡಿ ಮುಂತಾದವುಗಳು. ಇವರ ಸಾಹಿತ್ಯ ಸೇವೆಗಾಗಿ ‘ಕಣ್ಣು ನಾಲಗೆ ಕಡಲು’ ಕೃತಿಗೆ 1972ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಪ್ರೀತಿ ಪ್ರಗಾಥ’ ಕೃತಿಗೆ 1990ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ.

ಚಲನಚಿತ್ರ ಕ್ಷೇತ್ರದಲ್ಲಿ ‘ಆಲೆಮನೆ’ ಚಿತ್ರದ ಭಾವೈಕ್ಯತೆ ಗೀತೆಗಾಗಿ, ‘ಗಣೇಶನ ಮದುವೆ’ ಚಿತ್ರದ ಕಾವ್ಯಾತ್ಮಕ ಗೀತೆಗಾಗಿ, ‘ಜನುಮದ ಜೋಡಿ’ ಜಾನಪದೀಯ ಗೀತೆಗಾಗಿ-ಹೀಗೆ ಹಲವಾರು ಬಾರಿ ವಿಶೇಷ ಗೀತೆ ಪ್ರಶಸ್ತಿ, ವರ್ಷದ ಶ್ರೇಷ್ಠ ಗೀತೆ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ರಾಷ್ಟ್ರೀಯ ಪುರಸ್ಕಾರಗಳಾದ ಹೂ ಈಸ್ ಹೂ ನಲ್ಲಿ ದಾಖಲೆ, ಏಷಿಯಾ-ಫೆಸಿಫಿಕ್ ನಲ್ಲಿ ಸಾಧನೆಗಳ ಉಲ್ಲೇಖ, ಹಿಂದಿ ಭಾಷಾಂತರ ‘ಗೀತ ವೈಭವ್’ನಲ್ಲಿ 42 ಕವಿತೆಗಳ ಸೇರ್ಪಡೆ, ದೆಹಲಿಯ ಸರ್ವಭಾಷಾ ಕವಿ ಗೋಷ್ಠಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಕವನವಾಚನ. ಅಮೆರಿಕದ ಬಯೊಗ್ರಾಫಿಕಲ್ ಸೆಂಟರ್ ನ ಮೋಸ್ಟ್ ಅಡ್ಮೈರ್ಡ್ ಮೆನ್ ಅಂಡ್ ವುಮೆನ್ ಆಫ್ ದಿ ಇಯರ್ ನಲ್ಲಿ ವಿಶ್ವ ಪ್ರತಿಭಾವಂತರ ಪಟ್ಟಿಯಲ್ಲಿ ಉಲ್ಲೇಖ, ಅಮೆರಿಕದ ನಾರ್ಥ್ ಕೆರೊಲಿನಾ ಎ.ಬಿ.ಐ ಸಂಸ್ಥೆಯಿಂದ ಕವಿಯ ಜೀವನ ವಿವರಗಳ ದಾಖಲೆಗೆ ವಿಶ್ವಮಾನ್ಯತೆ, ಇಂಗ್ಲೆಂಡ್ನ ಮೆನ್ ಇನ್ ಅಚೀವ್ಮೆಂಟ್ ಸಂಪುಟದಲ್ಲಿ ಸಾಧನೆಗಳಿಗೆ ದೊರೆತ ವಿಶ್ವಮಾನ್ಯತೆ, ಎ.ಬಿ.ಐ. ಸಂಸ್ಥೆ ಯಿಂದ ಭಾರತೀಯ ಸಲಹೆಗಾರರಾಗಿ ನೇಮಕ, ಮಿಷಿಗನ್ ರಾಜ್ಯದಿಂದ ರೆಕಗ್ನಿಷನ್ ಅವಾರ್ಡ್, ಓರ್ಲಾಂಡೋದ ವಿಶ್ವಸಮ್ಮೇಳನದಲ್ಲಿ ಉಪನ್ಯಾಸ ಮುಂತಾದ ಅಂತಾರಾಷ್ಟ್ರೀಯ ಗೌರವಗಳಲ್ಲದೆ ಇದೀಗಲೂ ಹಲವಾರು ಸಂಘ ಸಂಸ್ಥೆಗಳ ಗೌರವ ಸದಸ್ಯರಾಗಿ, ಚಲನಚಿತ್ರ ಗುಣಮಟ್ಟದ ಚಿತ್ರಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ, ಎನ್.ಇ.ಟಿ ಗೌರ್ನಿಂಗ್ ಸದಸ್ಯರಾಗಿ, ಹಲವಾರು ಸಾಹಿತ್ಯ ಸಂಚಿಕೆಗಳ ಸಂಪಾದಕರಾಗಿ, ರಾಜ್ಯ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಅರ್ಪಿಸಿರುವ ಗೌರವ ಗ್ರಂಥಗಳು – ಸೃಜನ ಸಂಪನ್ನ, ಸಮಾಜ ಮುಖಿ, ಸಾಹಿತ್ಯ ಸಂಪದ, ಸಾಹಿತ್ಯ ವಿಮರ್ಶೆ, ಜಾನಪದ ಜಂಗಮ, ಒಲುಮೆಸಿರಿ, ಸಾಹಿತ್ಯ ಸಂಭ್ರಮ, ದೇಸಿ ದನಿ ಮತ್ತು ಸಾಹಿತ್ಯ ಸಿರಿ ಮುಂತಾದವುಗಳು.

ದೊಡ್ಡರಂಗೇಗೌಡರ ಕುರಿತು ಬರೆಯುವುದು ಬಹಳ ಇದೆ; ಅದು ಒಂದೆರಡು ಗುಕ್ಕಿಗೆ ಮುಗಿವಂಥ ಸರಕಲ್ಲ. ಸದ್ಯಕ್ಕೆ ಅವರ ‘ದೇಸೀ’ ಮನಸ್ಸು-ಹೃದಯ ಹೊಮ್ಮಿಸಿದ ಕೆಲ ಗೀತೆಗಳ ವಿಶೇಷತೆಗಳ ಕುರಿತು ಒಂದೆರಡು ಸಾಲು.
ಗೌಡರು ಗೀತಸಾಹಿತಿಯಾಗಿ ಚಿತ್ರರಂಗ ಪ್ರವೇಶಿಸುವ ಹೊತ್ತಿಗಾಗಲೇ ವಿಜಯನಾರಸಿಂಹ, ಚಿ.ಉದಯಶಂಕರ್, ಆರ್.ಎನ್.ಜಯಗೋಪಾಲ್ರಂಥ ಘಟಾನುಘಟಿಗಳು ಆಳವಾಗಿ ಬೇರುಬಿಟ್ಟಿದ್ದರು. ಇವರೆಲ್ಲರ ನಡುವೆ ಹಾಡುಬರೆದು ಸಾಹಿತ್ಯಿಕವಾಗಿಯೂ, ಕಮರ್ಷಿಯಲ್ ಆಗಿಯೂ ಭೇಷ್ ಎನ್ನಿಸಿಕೊಳ್ಳುವುದು ಅಂಥ ಸುಲಭದ ಮಾತಾಗಿರಲಿಲ್ಲ. ಆದರೆ ಇದನ್ನೊಂದು ಸವಾಲಾಗಿ ಸ್ವೀಕರಿಸಿದ ಗೌಡರು, ಮತ್ತದೇ ‘ಸಿನಿಮಾ ಪರಿಭಾಷೆಯ, ಸಾಂಪ್ರದಾಯಿಕ ಶೈಲಿಯ’ ಗೀತೆಗಳನ್ನು ರಚಿಸುವ ಗೋಜಿಗೆ ಹೋಗದೆ, ಈ ಮಣ್ಣಿನ ಕಣಕಣದಲ್ಲೂ ಬೆರೆತಿರುವ ಜಾನಪದೀಯ ನುಡಿಗಳನ್ನು, ಹೊಳಹುಗಳನ್ನು ಹೇರಳವಾಗಿ ಬಳಸಿದರು, ತಮ್ಮ ಅನನ್ಯತೆ ಉಳಿಸಿಕೊಂಡು ಯಶಸ್ವಿಯಾದರು. ಚಿತ್ರಗೀತೆಗಳೆಂದು ಅವಕ್ಕೆ ಭಾವಗೀತೆಗಳ ನಂತರದ ಸ್ಥಾನವನ್ನು ಕೊಡಲಿಲ್ಲ. ಚಿತ್ರಗೀತೆಯ ಹಣೆಪಟ್ಟಿಯಲ್ಲಿ ಹೊಮ್ಮಿದರೂ, ಅಂತರಾಳದಲ್ಲಿ ಅಪ್ಪಟ ಭಾವಗೀತೆಯಾಗಿಯೇ ಉಳಿಯುವಂಥ ಕಸುವನ್ನು ಗೌಡರು ಅದರಲ್ಲಿ ತುಂಬುತ್ತಿದ್ದರು.

ಈ ಗುಣವಿಶೇಷತೆ ಕಾಪಾಡಿಕೊಳ್ಳುವಾಗ ಎದುರಾಗುತ್ತಿದ್ದ ಅಗ್ನಿಪರೀಕ್ಷೆಯನ್ನು ತಾವು ಎದುರಿಸಿದ್ದು ಹೇಗೆಂಬುದನ್ನು ಗೌಡರೇ ಒಂದೆಡೆ ಹೀಗೆ ಹೇಳಿದ್ದಾರೆ: “ಚಿತ್ರಗೀತೆ ಬರೆಯುವುದನ್ನು ನಾನು ಹಗುರವಾಗಿ ಪರಿಗಣಿಸಲೇ ಇಲ್ಲ…. ಪ್ರತಿ ಹಾಡು ರಚಿಸುವಾಗಲೂ ವಿದ್ಯಾರ್ಥಿಯೊಬ್ಬ ಅಗ್ನಿಪರೀಕ್ಷೆಗೆ ಕುಳಿತಂತೆ ನನಗೂ ಕಾದಹೆಂಚಿನ ಮೇಲೆ ಕುಳಿತ ತೀವ್ರಾನುಭವ. ಆ ರಸಮಯ ಘಳಿಗೆಗಳಲ್ಲಿ ಕಲ್ಪನಾಲೋಕಕ್ಕೆ ಜಿಗಿದರೂ ಪಾತ್ರಗಳ, ಸನ್ನಿವೇಶಗಳ, ಮೂಲಕಥೆಯ ವಾಸ್ತವದ ನೆಲಗಟ್ಟು ಮರೆಯದೆ ಬರೆಯುತ್ತಾ ಹೋದೆ…”.

ಗೌಡರ ನೀಳ್ಗವಿತೆಯೊಂದರಿಂದ ಪ್ರಭಾವಿತರಾದ ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲರು, ತಮ್ಮ ‘ಪಡುವಾರಳ್ಳಿ ಪಾಂಡವರು’ ಚಿತ್ರಕ್ಕೆ ಹಳ್ಳಿಯ ಹಿನ್ನೆಲೆಯ ಭಾವದ ಗೀತೆಯೊಂದನ್ನು ಬರೆದುಕೊಡುವಂತೆ ಕೇಳಿದಾಗ, ಗೌಡರ ನೆರವಿಗೆ ಬಂದದ್ದು ಬಾಲ್ಯದಲ್ಲಿ ಹಳ್ಳಿಯಲ್ಲಿ ಅನುಭವಕ್ಕೆ ಬಂದ ಸಂಗತಿಗಳೇ. “ಜನ್ಮನೀಡಿದ ಭೂತಾಯಿಯ ನಾ ಹೇಗೆ ತಾನೆ ಮರೆಯಲಿ, ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ತೊರೆಯಲಿ..” ಎಂಬ ಈ ಹಾಡಲ್ಲಿ, ವಿದ್ಯಾಭ್ಯಾಸಕ್ಕೆಂದು ತಮ್ಮ ಹಳ್ಳಿಬಿಟ್ಟು ಬೆಂಗಳೂರಿಗೆ ಬರಬೇಕಾದ ಅನಿವಾರ್ಯ ಸಂದರ್ಭದಲ್ಲಿ ಹುಟ್ಟಿಬೆಳೆದ ಹಳ್ಳಿ, ತಮ್ಮನ್ನು ಎತ್ತಿ ಆಡಿಸಿದ ಮಾತೃಸ್ವರೂಪಿಗಳ ಬಗ್ಗೆ ಸ್ಫುರಿಸಿದ ಭಾವನೆಗಳನ್ನೇ ಸೇರಿಸಿ ಬರೆದು, ಭಾವನೆಗಳೇ ತಾವಾಗಿದ್ದಾರೆ ಗೌಡರು. ಈ ಹಾಡು ಚಿತ್ರದ ‘ಹೈಲೈಟ್’ ಆಗಿರುವುದು ವಿಶೇಷ.

ಗೀತರಚನೆಕಾರರಾಗಿ ಗೌಡರಿಗೆ ‘ಸ್ಟಾರ್ ವ್ಯಾಲ್ಯೂ’ ಬಂದದ್ದು ‘ಪರಸಂಗದ ಗೆಂಡೆತಿಮ್ಮ’ ಚಿತ್ರದಿಂದ. ಇದರ ಗ್ರಾಮೀಣ ಸೊಗಡಿನ ಹಾಡುಗಳನ್ನು ಧ್ವನಿಮುದ್ರಣದ ಸಮಯದಲ್ಲೇ ಕೇಳಿದ ಮತ್ತೊಬ್ಬ ಗೀತಸಾಹಿತಿ ಆರ್.ಎನ್. ಜಯಗೋಪಾಲ್, “ಗೀತರಚನೆಯಲ್ಲಿ ನೀವು ಹೊಸಹಾದಿಯನ್ನೇ ತೆರೆದಿದ್ದೀರಿ” ಎಂದು ಅಭಿನಂದಿಸಿದರು. ಮಾತುಗಳನ್ನು ಮಣ್ಣಿನಾಳದಿಂದ ಹೆಕ್ಕಿತೆಗೆದು ಗೌಡರು ರಚಿಸಹೊರಟಿದ್ದ ಜಾನಪದಕಾವ್ಯಕ್ಕೆ ಬರೆದ ಮುನ್ನುಡಿಯಂತಿತ್ತು, ಈ ಅಭಿನಂದನೆ. ಅದಕ್ಕೆ ಸಾಕ್ಷಿಯೆಂಬಂತೆ ‘ಅಂಬರ’, ‘ನೇಸರ’, ‘ಬೆಳ್ಳಕ್ಕಿ’, ‘ಪಲ್ಲಕ್ಕಿ’, ‘ಹೊಂಬಾಳೆ’, ‘ತೂಗ್ಯಾವೆ’, ‘ಹಾರ್ಯಾವೆ’, ‘ಕುಂತಾವೆ’, ‘ನಿಂತಾವೆ’, ‘ಕ್ವಾರಣ್ಯ ನೀಡವ್ವಾ’ ಇವೇ ಮೊದಲಾದ ದೇಸಿ ಪದಗಳನ್ನು ಗೀತೆಗಳಲ್ಲಿ ಯಥೇಚ್ಛವಾಗಿ ಬಳಸಿದ ಗೌಡರು, ಕನ್ನಡ ಚಿತ್ರರಸಿಕರಿಗೆ ಈ ಮಣ್ಣಿನ ಮಾತುಗಳನ್ನು ಅರೆದರೆದು ಕುಡಿಸಿದರು. ‘ಕಾನ್ವೆಂಟ್ ಇಂಗ್ಲಿಷ್’ ದಾಸರೇ ಬಹುತೇಕ ತುಂಬಿರುವ ನಗರಗಳ ಚಿತ್ರಮಂದಿರಗಳಲ್ಲೂ ‘ಜನುಮದ ಜೋಡಿ’ ಚಿತ್ರದ ಪ್ರದರ್ಶನದ ವೇಳೆ “ಕೋಲುಮಂಡೆ ಜಂಗುಮದೇವರು ಗುರುವೇ ಕ್ವಾರಣ್ಯಕೆ ದಯಮಾಡವ್ರೇ….” ಹಾಡಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದ್ದೇ ಅಲ್ಲದೇ, ಮತ್ತೊಮ್ಮೆ ಮಗದೊಮ್ಮೆ ಆ ಹಾಡನ್ನು ಹಾಕಿಸಿದ್ದು ಗೊತ್ತಿರುವಂಥದ್ದೇ. ಮಲೆ ಮಾದೇಶ್ವರನನ್ನು ಸ್ತುತಿಸುವ ಕಂಸಾಳೆ-ಭಕ್ತಿಗೀತೆಗೆ, ಪ್ರಿಯತಮನು ಪ್ರಿಯತಮೆಗೆ ಪ್ರೀತಿ ಅರುಹುವ ಸಾಲುಗಳನ್ನು ಮಿಳಿತಗೊಳಿಸಿದ ಗೌಡರ ಶೈಲಿ ಅನನ್ಯ.

ಗೌಡರೀಗ ಎಪ್ಪತ್ತೊಂದಕ್ಕೆ ಕಾಲಿಟ್ಟಿದ್ದಾರೆ (ಜನನ: 1946 ಫೆಬ್ರವರಿ 7). ಇದುವರೆಗಿನ ತಮ್ಮ ವೃತ್ತಿಜೀವನ, ಸಾಹಿತ್ಯಜೀವನದಲ್ಲಿ ಎದುರಾಗಿರುವ ಅನೇಕ ಕಹಿಸಂಗತಿಗಳನ್ನು ಗಂಟಲಲ್ಲಿಟ್ಟುಕೊಂಡೂ ‘ನೀಲಕಂಠ’ನಂತೆ ನಗುತ್ತಲೇ ಇರುವ, ಅರೆಪಾವಿನಷ್ಟು ಸ್ನೇಹಕ್ಕೆ, ವಾತ್ಸಲ್ಯಕ್ಕೆ ಕೈ ಮುಂದುಮಾಡುವ ಗೌಡರದ್ದು ಮಲ್ಲಿಗೆಯ ಮನಸ್ಸು. ಹೀಗಾಗಿ ಗೌಡರ, ಅವರ ಸಾಹಿತ್ಯಾಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಭಿನ್ನ ವಯೋಮಾನ, ಮನೋಧರ್ಮದ ಗೀತರಚನೆಕಾರರು ಚಿತ್ರರಂಗ ಪ್ರವೇಶಿಸುತ್ತಿದ್ದರೂ ಗೌಡರ ಸ್ಥಾನ ಇನ್ನೂ ಗಟ್ಟಿಯಾಗಿದೆಯೆಂದರೆ, ಅವರ ಮತ್ತು ಅವರ ಗೀತೆಗಳಲ್ಲಿನ ಮಲ್ಲಿಗೆಯ ಮನಸ್ಸು, ಜಾನಪದೀಯ ಹೃದಯವೇ ಅದಕ್ಕೆ ಕಾರಣವಿರಬೇಕು. ಆ ವಿಷಯದಲ್ಲಿ ಅವರು ನಿಜಕ್ಕೂ ‘ದೊಡ್ಡ’ರಂಗೇಗೌಡರೇ. ಏಕೆಂದರೆ ಅವರು “ನೋಟದಾಗೆ ನಗೆಯಾ ಮೀಟಿಯೂ, ಮೋಜಿನಾಗೆ ಎಲ್ಲೆಯನ್ನು ದಾಟದ ಗೆಂಡೆತಿಮ್ಮ”.
‘ಜಾನಪದ ಗಾರುಡಿಗ’ ಗೌಡರು ಮತ್ತು ಅವರ ಜಾನಪದೀಯ ಲೇಖನಿ ಎರಡೂ ನೂರ್ಕಾಲ ಬಾಳಲಿ. ಕನ್ನಡಾಂಬೆಯ ಮಡಿಲು ಮತ್ತೊಂದಿಷ್ಟು ‘ಗೀತೆಗಳ ಘಮಲಿನಿಂದ’ ತುಂಬಲಿ.

ಸಾಹಿತ್ಯ ಮತ್ತು ಸಿನಿಮಾಲೋಕಗಳೆರಡರಲ್ಲೂ ದೊಡ್ಡರಂಗೇಗೌಡರು ಕನ್ನಡ ನಾಡಿನ ಹಲವಾರು ವಿಶಿಷ್ಟ ಗೌರವಗಳಿಗೆ ಪಾತ್ರರಾಗಿದ್ದಾರೆ. ಇಷ್ಟೆಲ್ಲಕ್ಕೂ. ಇಂಥಹ ಗುಣಮಟ್ಟ ನೀಡುವುದಕ್ಕೂ ಅವರಿಗೆ ಸಮಯ ಸಿಕ್ಕುವುದು ಹೇಗೋ ದೊಡ್ಡರಂಗೇಗೌಡರು ಮತ್ತು ಆ ಪರಮಾತ್ಮ ಇಬ್ಬರೇ ಬಲ್ಲರು. ಆ ಪರಮಾತ್ಮ ನಮಗೆ ದೊಡ್ಡರಂಗೇಗೌಡರ ಮೂಲಕ ಇಂತಹ ಕೊಡುಗೆಗಳನ್ನು ಸದಾಕಾಲ ವೃಷ್ಠಿಸುತ್ತಿರುವಂತಾಗಲಿ.

ದೊಡ್ಡರಂಗೇಗೌಡರ ಬದುಕು ಸುಂದರವಾಗಿರಲಿ ಎಂದು ಹಾರೈಸುತ್ತಾ ಅವರಿಗೆ ತುಂಬು ಹೃದಯದ ಗೌರವಪೂರ್ವಕ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸೋಣ.

ಶ್ರೀನಿವಾಸ್ ಗೌಡ,
ಸಹ ಸಂಪಾದಕರು,
ಇಂದಿನ ಏಕಲವ್ಯ ಹಾಗೂ ಮಾಧ್ಯಮ ನಿರ್ವಾಹಣೆ
Back to Bangalore.com

1 COMMENT

  1. Hi there! This article could not be written any better! Looking
    at this article reminds me of my previous roommate! He continually kept preaching about this.

    I most certainly will send this information to him.
    Fairly certain he’s going to have a very good
    read. Thank you for sharing!

Comments are closed.