ಮರೆಯಲಾಗದ ವರಕವ...

ಮರೆಯಲಾಗದ ವರಕವಿ ದ.ರಾ.ಬೇಂದ್ರೆ

214
1
SHARE

ನಾಡಿನ ಸಮಸ್ತ ಜನರಿಗೆ ಹಾಗೂ ಅಪಾರ ಸಂಖ್ಯೆಯ ಓದುಗರಿಗೂ ವರಕವಿ ದ.ರಾ.ಬೇಂದ್ರೆ ರವರ 121ನೇ ಜನ್ಮೋತ್ಸವದ ಶುಭಾಶಯಗಳು.
ಪ್ರತಿವರ್ಷ ಜನೆವರಿ ತಿಂಗಳ ಮೂವತ್ತೊಂದನೆ ತಾರೀಕು ಬಂತೆಂದರೆ ನನಗೆ ವರಕವಿ ಬೇಂದ್ರೆಯವರ ನೆನಪು ಬರುತ್ತದೆ. ಕಾರಣವೇನೆಂದರೆ ಅದು ಬೇಂದ್ರೆ ಹುಟ್ಟಿದ ದಿನ. 1896 ನೇ ಇಸವಿ ಜನೆವರಿ ತಿಂಗಳ 31 ರಂದು ಅವರು ಧಾರವಾಡದಲ್ಲಿ ಜನಿಸಿದರು. ಈ ಸಂಧರ್ಭದಲ್ಲಿ ಅವರೆ ರಚಿಸಿದ ಒಂದು ಕವನ ” ಮೀನಕೇತು ” ನನಗೆ ನೆನಪಿಗೆ ಬರುತ್ತದೆ. ಆ ಕವನದಲ್ಲಿ ಅವರು ಕಾವ್ಯದ ಹುಟ್ಟು ಮತ್ತು ಅದರ ಕೊಡುಗೆಗಳ ಬಗ್ಗೆ ವಿವರಿಸಿ ಅವು ಮರೆಯಾದರೂ ಅವುಗಳ ಅರ್ಥ ಕುರುಹುಗಳು ಮರೆಯಾಗುವುದಿಲ್ಲ ಎಂಬುದನ್ನು ವಿವರಿಸುವ ಕವನವಿದು. ಅದರಲ್ಲಿ ಕವಿ ಒಂದೆಡೆ ಹೀಗೆ ಬರೆಯುತ್ತಾರೆ.
ಅರಣಿಗೆ ಅರಣಿ ಬೆಂಕಿಯ ಕರಣಿ
ಹೊತ್ತಿತು ತಲೆ ಎತ್ತಿ
ಮರೆಯಾತು ದೀಪ ಮರೆಯಾತು ರೂಪ
ಬೂದಿಯೊಳೀಬತ್ತಿ
ದೀಪ ಆರಿದರೂ ಅದರ ರೂಪ ಶಾಶ್ವತವಾಗಿ ಉಳಿಯುತ್ತದೆ. ಬೆಂಕಿ ಬೂದಿಯಾಗಿ ವಿಭೂತಿಯಾಗುತ್ತದೆ. ಅಂದರೆ ಕವಿ ಮರೆಯಾದರೂ ಆತನ ಕಾವ್ಯ ಕಾಣ್ಕೆ ಉಳಿಯುತ್ತದೆ. ಕವಿ ಬೇಂದ್ರೆ ನಮ್ಮನಗಲಿದ್ದರೂ ಅವರ ಆತ್ಮ ಸದೃಶವಾದ ಕಾವ್ಯ ರೂಪದಲ್ಲಿ ನಮ್ಮನ್ನು ರಂಜಿಸುತ್ತ ರೂಪಿಸುತ್ತ ಬೆಳೆಯುತ್ತ ಸಾಗಿದ್ದಾರೆ.ಕಾಲಚಕ್ರದ ಗತಿಯಲ್ಲಿ ನಶಿಸುವ ಕವಿಯಲ್ಲ ಬೇಂದ್ರೆ. ಹೊಸರೂಪ ಹೊಸದರ್ಶನಗಳನ್ನು ಕಾಣಿಸುತ್ತ ಹೋಗುವ ಅಮರ ಕವಿ ಅಂಬಿಕಾ ತನಯ ದತ್ತರು.
ಬೇಂದ್ರೆ ನನ್ನನ್ನು ಗಾಢವಾಗಿ ತಟ್ಟಿದ ಕವಿ, ಅದಕ್ಕೆ ಕಾರಣ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ವಿಶದ ವಾಗಿ ಪಾಠ ಮಾಡಿ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಉಕ್ಕುವಂತೆ ಪಾಠ ಮಾಡಿದ ಶಿಕ್ಷಕರು. ಈ ಸಂಧರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುವುದು ಸೂಕ್ತ ವೆನಿಸುತ್ತದೆ. ಯಾಕೆಂದರೆ ಕವಿಗಳು ಯಾರೇ ಇರಲಿ ಅದೇ ತನ್ಮಯತೆಯಿಂದ ಅವರ ಬಗೆಗೆ ಸವಿವರವಾಗಿ ಗುರುವರ್ಯರುಗಳು ಪಾಠ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಆ ರೀತಿಯ ಪಾಠ ಮಾಡಿದವರನ್ನು ನಾ ಕಾಣೆ. ಅವರು ಪಾಠ ಮಾಡುವ ಕ್ರಮದಲ್ಲಿ ಒಂದು ವಿಶಿಷ್ಟವಾದ ಕಾವ್ಯ ದರ್ಶನವಿರುತ್ತಿತ್ತು.
ಕುವೆಂಪು ಮತ್ತು ಬೇಂದ್ರೆ ಕನ್ನಡ ಕಾವ್ಯ ಜಗತ್ತಿನ ಎರಡು ಕಣ್ಣುಗಳು, ಇಬ್ಬರೂ ಜ್ಞಾನಪೀಠ ಪುರಸ್ಕೃತರು. ಕುವೆಂಪುರವರ ” ಶ್ರೀ ರಾಮಾಯಣ ದರ್ಶನಂ ” ಕೃತಿಗೆ ಆ ಪ್ರಶಸ್ತಿ ಸಂದರೆ , ಬೇಂದ್ರೆ ಯವರ ” ನಾಕು ತಂತಿ ” ಕೃತಿಗೆ ಆ ಪ್ರಶಸ್ತಿ ಬಂದಿದೆ. ಇವರಿಬ್ಬರ ಕಾವ್ಯ ರಚನಾ ಶೈಲಿ ಭಿನ್ನ. ಕುವೆಂಪು ಸಂಸ್ಕೃತ ಮಿಶ್ರಿತ ಹಳಗನ್ನಡ ಬನಿಯಲ್ಲಿ ಕಾವ್ಯ ರಚನೆ ಮಾಡಿದರೆ, ಬೇಂದ್ರೆಯವರು ಜಾನಪದ ಸೊಗಡಿನ ಆಡುಭಾಷೆಯ ದೇಶೀ ಶೈಲಿಯನ್ನು ಬಹಳ ಸಮರ್ಥವಾಗಿ ಬಳಸಿಕೊಂಡು ಬರೆದ ಕವಿ.ಕುವೆಂಪುರವರ ಕರ್ಮಭೂಮಿ ಮೈಸೂರು ಆದರೆ ಬೇಂಧ್ರೆ ಯವರದು ಧಾರವಾಡ. 1926 ರಲ್ಲಿ ಗೆಳೆಯರ ಗುಂಪಿನ ವತಿಯಿಂದ ನಾಡಹಬ್ಬದ ಆಚರಣೆಯನ್ನು ಪ್ರಾರಂಬಿ ಸಿದರು. ಆ ಬಳಗದ ಪ್ರಮುಖರೆಂದರೆ ವಿ.ಕೃ.ಗೋಕಾಕ, ಕಾವ್ಯಾನಂದ ಮತ್ತು ಚೆನ್ನವೀರ ಕಣವಿ ಕಾವ್ಯಾಸಕ್ತರನ್ನು ಒಳಗೊಂಡಿದ್ದ ಮತ್ತು ಒಂದು ಚಿಂತನಪರ ಸಂಘಟನೆಯಾಗಿತ್ತು.
ಭಾರತದ ಸ್ವಾತಂತ್ರ ಸಂಗ್ರಾಮ ಕಾಲದಲ್ಲಿ ಬ್ರಿಟೀಷರ ದಾಸ್ಯವನ್ನು ಪ್ರತಿಭಟಿಸಿ ತಮ್ಮ ಕವನಗಳ ಮೂಲಕ ಜನ ಜಾಗೃತಿಗೆ ಕಾರಣ ರಾದರು. ಅವರು ರಚಿಸಿದ ನರಬಲಿ ಕವನ ಬ್ರಿಟೀಷರ ಕಣ್ಣು ಕೆಂಪಗಾಗಿಸಿತು. ಆ ಕಾರಣದಿಂದಾಗಿ ಅವರು ಹಿಂಡಲಗಾ ಜೈಲುವಾಸ ಅನುಭವಿಸುವಂತಾಯಿತು..ನಂತರದ ದಿನಗಳಲ್ಲಿ ಅವರನ್ನು ಮುಗದ ಗ್ರಾಮದಲ್ಲಿ ಸ್ಥಾನಬದ್ಧತೆಯಲ್ಲಿ ಇಡಲಾಯಿತು. ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಆದರೆ ಇವರು ಕನ್ನಡ ಕಾವ್ಯ ಜಗತ್ತಿಗೆ ನೀಡಿದ ಕೊಡುಗೆ ಅನನ್ಯ. ಇವರ ರಚನೆಗಳು ಬಡತನ, ನಿರುದ್ಯೋಗ, ಪ್ರಕೃತಿ, ಪರಿಸರ, ಸಾಮಾಜಿಕ ಅಸದಮತೋಲನ, ಶೋಷಣೆ, ದೇಶ ಪ್ರೇಮಗಳನ್ನು ಕುರಿತು ಬರೆದವುಗಳೆಂದು ಸ್ಥೂಲವಾಗಿ ವರ್ಗೀಕರಿಸಬಹುದು.ಇವು ಓದುಗನನ್ನು ಚಿಂತನೆಗೆ ಹಚ್ಚುವ ರಚನೆಗಳು.
ಇವರ ಕೃತಿಗಳ ಬಗ್ಗೆ ಸ್ಥೂಲವಾಗಿ ವಿವರಿಸುವದಾದಲ್ಲಿ ಗಂಗಾವತರಣ, ನಾದಲೀಲೆ, ಸಖೀಗೀತ, ನಾಕುತಂತಿ, ಗರಿ, ಅರಳುಮಲ್ಲಿಗೆ, ಮತ್ತೆ ಶ್ರಾವಣಬಂತು, ಅವರ ಶ್ರೇಷ್ಟ ಕೊಡುಗೆಗಳು. ಅವರು ಅರವಿಂದರ ಇಂಗ್ಲೀಷ್ ಕೃತಿ ಯೊಂದನ್ನು ‘ ಭಾರತೀಯ ನರಜನ್ಮ ‘ವೆಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದ ಶ್ರೇಷ್ಟ ಕಾದಂಬರಿಕಾರ ರಲೊಬ್ಬರಾದ ಕೆ.ವಿ.ಅಯ್ಯರ ರವರ ‘ ಶಾಂತಲಾ ‘ ಕಾದಂಬರಿಯನ್ನು ಮರಾಠಿ ಬಾಷೆಗೆ ಅನುವಾದಿಸಿದ್ದಾರೆ. ಎ ಥಿಯರಿ ಆಫ್ ಇಮ್ಮೋರ್ಟಾಲಿಟಿ ಮತ್ತು ಲ್ಯಾಗ್ವೇಜ್ – ಮ್ಯಾಥಮ್ಯಾಟಿಕ್ಸ್ -ಆಂಡ್ ಟ್ರುತ್ ಎಂಬ ಕೃತಿಗಳನ್ನು ಇಂಗ್ಲೀಷ್ ನಲ್ಲಿ ರಚಿಸಿದ್ದಾರೆ. ಕಾಳಿದಾಸನ ‘ ಮೇಘದೂತ ‘ ವನ್ನು ಕನ್ನಡಕ್ಕೆ ಅನುವಾದಿಸಿದ್ದು ಅದು ಬೇಂದ್ರೆ ಯವರ ಸ್ವತಂತ್ರ ಕೃತಿಯೇನೋ ಎನ್ನುವಷ್ಟರ ಮಟ್ಟಿಗೆ ಅದಕ್ಕೆ ಬೇಂದ್ರೆತನವನ್ನು ತುಂಬಿದ್ದಾರೆ. ಕಥಾ ಹಂದರದ ಸೂಕ್ಷ್ಮ ಎಳೆಯನ್ನು ಮಾತ್ರ ಮೂಲ ಕಾವ್ಯದಿಂದ ಪಡೆದದ್ದು ಬಿಟ್ಟರೆ ಉಳಿದದ್ದೆಲ್ಲ ಬೇಂದ್ರೆಯವರ ಸ್ವಂತಿಕೆಯ ಮೂಸೆಯಲ್ಲಿ ಮೂಡಿ ಬಂದಿದೆ. ಹೊಸ ಸಂಸಾರ, ಹುಚ್ಚಾಟಗಳು, ಸಾಯೋಆಟ, ಜಾತ್ರೆ, ದೆವ್ವದಮನೆ, ಮಂದಿಮನೆ ಮುಂತಾದ ಹದಿನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ಇವಲ್ಲದೆ ಆರು ಸಂಪಾದನಾ ಗ್ರಂಥಗಳನ್ನು ತಂದಿದ್ದಾರೆ. ಇವರ ಹಲವು ಕವನಗಳನ್ನು ಕುಲವಧು, ಚಕ್ರತೀರ್ಥ, ಅರಿಷಿಣ ಕುಂಕುಮ, ಬೆಳ್ಳಿಮೋಡ ಮತ್ತು ಶರಪಂಜರ ಮುಂತಾದ ಚಲನಚಿತ್ರಗಳಲ್ಲಿ ಸಂಧರ್ಭಕ್ಕನುಸಾರವಾಗಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಇವರ ಗಂಗಾವತರಣ ಕವನ ಇವರ ಶ್ರೇಷ್ಟ ರಚನೆ ಗಳ ಪೈಕಿ ಒಂದು.
ಇಳಿದು ಬಾ ತಾಯೆ
ಇಳಿದು ಬಾ
ಇಳಿದು ಬಾ ತಾಯೆ
ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವ ದೇವರನು
ತಣಿಸಿ ಬಾ
ದಿಗ್ದಿಗಂತದಲಿ ಹನಿಸಿ ಬಾ
ಚರಾಚರಗಳಿಗೆ
ಊಣಿಸಿ ಬಾ
ಬಾರೆ ಬಾ ತಾಯೆ
ಇಳಿದು ಬಾ…….. . . . .
ಈ ಕವನ ಭಾರತೀಯ ದರ್ಶನವನ್ನು ನಮ್ಮೆದುರು ಬಿಡಿಸಿ ತೋರಿಸುತ್ತದೆ. ಭಾರತೀಯರ ನಂಬಿಕೆಗಳು, ಆಧ್ಯಾತ್ಮ, ಜೀವನ ದರ್ಶನ, ಮೋಕ್ಷದ ಪರಿಕಲ್ಪನೆ ಇವುಗಳು ತಳಕು ಹಾಕಿ ಕೊಂಡಿರುವುದು ಅಬೇಧ್ಯ ಹಿಮವಂತ ನಲ್ಲಿ. ಮಾನಸ ಸರೋವರ, ಕೈಲಾಸ ಪರ್ವತ, ಗಂಗೋತ್ರಿ, ಯಮನೋತ್ರಿ, ಕಾಸಿ, ಹರಿದ್ವಾರ, ಗಯಾ, ಪ್ರಯಾಗ, ಹೃಷಿಕೇಶ, ಬದರಿನಾಥ, ಕೇದಾರನಾಥ ಗಳಂತಹ ಪುಣ್ಯ ಕ್ಷೇತ್ರಗಳಿರುವುದು ಆ ಹಿಮವಂತನಲ್ಲಿ. ಈ ಪುಣ್ಯಕ್ಷೇತ್ರ ಗಳ ದರ್ಶನ ಪ್ರತಿಯೊಬ್ಬ ಭಾರತೀಯುನ ನಂಬಿಕೆ ಮತ್ತು ಕನಸು. ಗಂಗೆ ದೇವಲೋಕದಿಂದ ಭೂಮಿಗೆ ಹರಿದು ಬರುವುದು, ಭಗಿರಥ ತನ್ನ ಜಟೆಯಲ್ಲಿ ಗಂಗೆಯನ್ನು ಧರಿಸಿ ಭೂಲೋಕದಲ್ಲಿ ಆಕೆಯ ಹರಿಯುವಿಕೆಗೆ ಮಧ್ಯವರ್ತಿ ಯಾಗುವುದು ಇವೆಲ್ಲ ಎಷ್ಟು ಸುಂದರ ಪುರಾಣ ಪರಿಕಲ್ಪನೆ ಮತ್ತು ರೂಪಕಗಳು. ಈ ಕವನ ರಚನೆಗೆ ಅವರಿಗೆ ಪ್ರೇರಣೆ ಆಗ ಬಂಗಾಲದಲ್ಲಿ ಸಂಭವಿಸಿದ ಭೀಕರ ಬರಗಾಲದ ರೌದ್ರ ಪ್ರಸಂಗ. ಅವ್ಯಾಜ್ಯ ಕರುಣೆ ಈ ಕವನದ ಸ್ಥಾಯಿ ಭಾವಗಳು 1943 ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮೇಲ್ಕಂಡ ಕವನವನ್ನು ವಾಚನ ಮಾಡಿದರು. ಅಂತೆಯೆ ಇವರ ಒಂದೊಂದು ಕವನ ಒಂದೊಂದು ವಿಶಿಷ್ಟ ಅನುಭವ ಕೊಡುವ ಗುಣ ಹೊಂದಿವೆ ಎನ್ನುವುದು ಅಷ್ಟೆ ನಿಜ.
ಬೇಂದ್ರೆ ಯವರ ಕಾವ್ಯ ಮೂಲ ಅಸರೆ ಪಂಚ ಭೂತಾತ್ಮಕ ಜಗತ್ತು, ಆದರೆ ಮೂಲ ಆಶಯ ಭಾವಶುದ್ಧಿ. ಅದಿ ಇಲ್ಲದ ಯಾವುದೇ ಚಿಂತನೆ ಮತ್ತು ರಚನೆಗಳು ಗ್ರಾಹ್ಯವಲ್ಲ ಎಂಬುದು ಅವರ ಆಶಯವಾಗಿತ್ತು. ಅವರು ‘ ಕಗ್ಗ ‘ ಎಂಬ ಕವನ ಬರೆದಿದ್ದಾರೆ. ಅದರಲ್ಲಿ ಕವಿ ಕಗ್ಗ ಎಂಬ ಪದ ಪ್ರಯೋಗವನ್ನು ಏಕೆ ಮಾಡಿದ್ದಾರೆ ಎಂದರೆ ಕವಿ ಮತ್ತು ಓದುಗರ ಓದುವ ಕ್ರಿಯೆಯಲ್ಲಿ ಹೊಂದಿಕೆ ಬಂದರೆ ಅದು ಸಗ್ಗ, ಇಲ್ಲದಿದ್ದರೆ ಅದು ಬರಿ ಕಗ್ಗ. ಇಲ್ಲಿ ಓದುಗ ಕವನದ ನಾಡಿ ಬಡಿತವನ್ನು ಅರಿಯ ಬೇಕೆಂಬುದು ಕವಿ ಬೇಂದ್ರೆ ಯವರ ಆಶಯ.
ನಮ್ಮ ಪ್ರಮುಖ ಹಬ್ಬವಾದ ದೀಪಾವಳಿ ಕತ್ತಲೆಯ ಭೀತಿಯನ್ನು ಓಡಿಸಿ ಬೆಳಕಿನ ಅಭಯವನ್ನು ಕೊಡುವ ಹಬ್ಬ. ಇದೊಂದು ಜೀವನದ ಸುಂದರ ರಾಗದ ಅಭಿವ್ಯಕ್ತಿ ಮತ್ತು ಕೋಮಲ ಭಾವಗಳನ್ನು ಬಡಿದೆಬ್ಬಿಸುವ ಪ್ರೀತಿ ಪ್ರೇಮ ಉಲ್ಲಾಸ ಮುಂತದವನ್ನು ಬಡಿದೆಬ್ಬಿಸುವ ಪುರಾತನ ಪರಿಕಲ್ಪನೆ ಮತ್ತು ನಂಬಿಕೆಗಳನ್ನು ಉದ್ದೀಪಿಸುವ ಬೆಳಕಿನ ಹಬ್ಬ ಮಾತ್ರವಲ್ಲ ಕತ್ತಲೆ ಬೆಳಕುಗಳ ಸಮ್ಮಿಶ್ರ ಸಮರಸಭಾವದ ಗೀತ ಗಾಯನವಾಗಿದೆ. ನರಕ ಚತುರ್ದಶಿ ಚಿರಂತನ ಬೆಳಕಿನ ಒಂದು ರೂಪಕ. ಆದರೆ 1981 ರ ಅಕ್ಟೋಬರ್ 26 ರಂದು ನರಕ ಚತುರ್ದಶಿ ಕನ್ನಡಿಗರ ಪಾಲಿಗೆ ಕರಾಳ ದಿನವಾಗಿ ಮೂಡಿ ಬಂತು.
ಕನ್ನಡ ಕಾವ್ಯಪ್ರಭೆ, ವರಕವಿ, ಗಾನಗಾರುಡಿಗ ಎಂಬೆಲ್ಲ ಅಭಿದಾನಗಳನ್ನು ಪಡೆದ ಬೇಂದ್ರೆ ಮೂಂಬೈನ ಹರಿಕಿಶನ್ ಆಸ್ಪತ್ರೆಯಲ್ಲಿ ತಮ್ಮ ಜೀವನಯಾತ್ರೆಯನ್ನು ಮುಗಿಸಿದರು. ಅವರು ಸಾಗಿಹೋದ ಪಥ ನಮ್ಮ ಮುಂದೆ ಇದೆ. ಅವರ ನೆನಪು ನಮ್ಮಲ್ಲಿ ನಾಡು ನುಡಿಯ ಅಭಿಮಾನವನ್ನು ಉಕ್ಕಿಸಲಿ, ಕನ್ನಡ ನಾಡು ನುಡಿ ಅಭಿವೃದ್ಧಿ ಹೊಂದಲಿ, ಸತ್ವಪೂರ್ಣ ಸಾರ್ಥಕ ಬದುಕು ನಮ್ಮೆಲ್ಲರದಾಗಲಿ. ನಮ್ಮನಾಡ ಪ್ರೇಮ ಉಜ್ವಲವಾಗಲಿ. ಕನ್ನಡದ ಕವಿ ಸಾಹಿತಿಗಳ ಕೃತಿಗಳನ್ನು ಒದುವಂತೆ ನಮ್ಮೆಲ್ಲರನ್ನು ಪ್ರೇರೇಪಿಸಲಿ.
ಶಾಸ್ತ್ರೀಯ ಭಾಷೆಯ ಸಮ್ಮಾನವನ್ನು ಪಡೆದ ಕನ್ನಡ ಅಭಿವೃದ್ದಿಯನ್ನು ಹೊಂದಿ ಪ್ರಗತಿಪಥದಲ್ಲಿ ಸಾಗಲಿ.
ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ನಮ್ಮೆಲ್ಲರ ದಾಗಲಿ.
ಲೇಖನ: ಶ್ರೀನಿವಾಸ್ ಗೌಡ
ಸಹ ಸಂಪಾದಕರು, ಇಂದಿನ ಏಕಲವ್ಯ

1 COMMENT

Comments are closed.