ಪುರಂದರ ಆರಾಧನಾ...

ಪುರಂದರ ಆರಾಧನಾ ಅಂಗವಾಗಿ ನಗರದಲ್ಲಿ ವಿಶಿಷ್ಟ ದಾಸಸಾಹಿತ್ಯೋತ್ಸವ

60
0
SHARE

“ಅರಳುಮಲ್ಲಿಗೆ ಪ್ರತಿಷ್ಠಾನ” ಸಂಸ್ಥೆಯು ನಗರದ ಗಾಯನ ಸಮಾಜದ ನವೀಕೃತ ಸಭಾಂಗಣದಲ್ಲಿ ವಿಶಿಷ್ಟವಾದ ದಾಸಸಾಹಿತ್ಯ ಉತ್ಸವವನ್ನು ಏರ್ಪಡಿಸಿತ್ತು. ಪುರಂದರದಾಸರ ಆರಾಧನಾ ಪ್ರಯುಕ್ತ ನಡೆದ ಈ ಸಮಾರಂಭದಲ್ಲಿ ರಾಷ್ಟ್ರೀಯ ಸನ್ಮಾನ ಹಾಗೂ ಅಪೂರ್ವ ಗ್ರಂಥಗಳ ಬಿಡುಗಡೆ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಭಾವಿ ಪರ್ಯಾಯ ಪೀಠವೇರಲಿರುವ ಉಡುಪಿಯ ಫಲಿಮಾರು ಪೀಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದ ದಾಸಸಾಹಿತ್ಯೋತ್ಸವದಲ್ಲಿ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ವಿದ್ವಾನ್ ಆರ್.ಕೆ.ಪದ್ಮನಾಭ, ಶಾಸಕರಾದ ರವಿ ಸುಬ್ರಹ್ಮಣ್ಯ ಡಾ|| ಎಂ. ಆರ್. ವಿ. ಪ್ರಸಾದ್, ಶ್ರೀನಿವಾಸರಾವ್ ಕಸ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದಾಸವಾಣಿ ಖ್ಯಾತಿಯ ಶಶಿಧರ ಕೋಟೆ ಅವರಿಂದ ವಿಶೇಷ ಭಕ್ತಿಗಾಯನ ನಡೆಯಿತು.

ರಾಜ್ಯದ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಭಜನ ಆಂದೋಲನ ಮಾಡಿರುವ ಹರಿದಾಸ ಸಂಘದ ಸಂಸ್ಥಾಪಕರೂ, ಖ್ಯಾತ ಪ್ರವಚನಕಾರರೂ ಆದ ಹರಾ ನಾಗರಾಜಾಚಾರ್ಯರಿಗೆ ಇಂಡಿಯನ್ ಪೀಸ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ನೀಡಿರುವ ಸಂದರ್ಭದಲ್ಲಿ ಶ್ರೀಯುತರಿಗೆ ರಾಷ್ಟ್ರೀಯ ಸನ್ಮಾನ ಕಾರ್ಯಕ್ರಮವನ್ನು ಅರಳುಮಲ್ಲಿಗೆ ಪ್ರತಿಷ್ಠಾನ ವ್ಯವಸ್ಥೆ ಮಾಡಿತ್ತು.
ಇದೇ ಸಂದರ್ಭದಲ್ಲಿ ಈಗಾಗಲೇ ಐವತ್ನಾಲ್ಕು ಹರಿದಾಸ ಗ್ರಂಥಗಳನ್ನು ಸಮಾಜಕ್ಕೆ ನೀಡಿ, ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಅತ್ಯಂತ ಪ್ರಭಾವಪೂರ್ಣವಾಗಿ ದಾಸಸಾಹಿತ್ಯ ಪ್ರಚಾರ ಮಾಡಿ ಬಂದಿರುವ ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ವಿದ್ವಾಂಸರಾದ ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿಯವರಿಂದ ರಚಿತವಾದ “ಪಾರ್ಥಸಾರಥಿ ವಿಠಲದಾಸರ ಸಹಸ್ರಾರು ಕೀರ್ತನೆಗಳು” ಎಂಬ ಏಳು ನೂರು ಪುಟಗಳ ಗ್ರಂಥ ಹಾಗೂ ಒಂದು ಸಾವಿರದ ಒಂಭೈನೂರು ಪುಟಗಳ ಉದ್ಗ್ರಂಥ “ಹರಿದಾಸರ ಹತ್ತುಸಾವಿರ ಹಾಡುಗಳು” ಕೃತಿಯ ನಾಲ್ಕನೆಯ ಆವೃತ್ತಿಯ ಲೋಕಾರ್ಪಣೆಯೂ ನಡೆಯಿತು. ಅಸಗೋಡು ಜಯಸಿಂಹ, ಶ್ರೀವಾರಿ ಎಸ್. ವೆಂಕಟೇಶ್ ಮೂರ್ತಿ, ಕ್ಯಾಪ್ಟನ್ ಮಣಿ,ಡಾ|| ರಾಮಶೇಷನ್, ಭಾನುಪ್ರಕಾಶ್, ಶ್ರೀಮತಿ ಮಂಗಳಾ ಭಾಸ್ಕರ್, ಶ್ರೀ ಸಚ್ಚಿದಾನಂದಮೂರ್ತಿ ಮುಂತಾದವರು ವಿಶೇಷ ಆಹ್ವಾನಿತರಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಹರಾ ನಾಗರಾಜಾಚಾರ್ಯರಿಂದ ಸಂಪಾದಿತ ಕೃತಿ ಹರಿದಾಸವಾಣಿ ಈಗಾಗಲೇ ಎರಡುಲಕ್ಷ ಪ್ರತಿಗಳು ಓದುಗರಿಗೆ ತಲುಪಿದ್ದು, ತೆಲುಗು, ತಮಿಳು ಭಾಷೆಗೂ ಅನುವಾದವಾಗಿದೆ. ವಾದಿರಾಜ ಪ್ರಶಸ್ತಿ, ವಿಜಯೀಂದ್ರ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪುರಂದರ ಪ್ರಶಸ್ತಿ, ಮುಂತಾದ ಗೌರವ ಪ್ರಶಸ್ತಿ ಭಾಜನರಾಗಿದ್ದಾರೆ. ಹಾಗೆಯೇ ಐವತ್ನಾಲ್ಕು ಗ್ರಂಥಗಳು ಹಾಗೂ ನಲವತ್ತು ಧ್ವನಿ ಮುದ್ರಿಕೆಗಳು, ನಾಲ್ಕು ಸಹಸ್ರಕ್ಕೂ ಹೆಚ್ಚು ದೇಶವಿದೇಶಗಳಲ್ಲಿ ಮಾಡಿರುವ ಅಪೂರ್ವ ಪ್ರವಚನಗಳಿಂದಾಗಿ ವಿಶ್ವವಿಖ್ಯಾತರಾಗಿರುವ ಅರಳುಮಲ್ಲಿಗೆ ಪಾರ್ಥಸಾರಧಿಯವರು ಜಗತ್ತಿನ ನಾನಾ ರಾಷ್ಟ್ರಗಳ ಗಣ್ಯಾತಿಗಣ್ಯರಿಂದ ಹಾಗೂ ಪ್ರತಿಷ್ಠಿತ ಸಂಘಸಂಸ್ಥೆಗಳಿಂದ ವಿಶೇಷ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ನಂತಹ ಅಂತರರಾಷ್ಟ್ರೀಯ ಮಹತ್ವದ ಸಂಸ್ಥೆಯ ಸಂಸ್ಥಾಪಕರಾಗಿ, ದಾಸಸಾಹಿತ್ಯ ಹಾಗೂ ವಿಷ್ಣುಸಹಸ್ರನಾಮಗಳ ಬೃಹತ್ ಸಂಚಲನವನ್ನು ವಿಶ್ವಮಟ್ಟದಲ್ಲಿ ಶ್ರೀಯುತರು ಮೂಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Reported by: Jaragangahalli Kantharaju
9483439343