ಸಾಟಿ ಇರದ ದೇವಸ...

ಸಾಟಿ ಇರದ ದೇವಸಸಿ – ಶ್ರೀತುಲಸಿ

58
0
SHARE

ನೋಡಿದರೆ ಪಾಪಗಳನ್ನು ಕಳೆಯುವಳು.
ಮುಟ್ಟಿದರೆ ದೇಹವನ್ನು ಪವಿತ್ರಗೊಳಿಸುವಳು
ನಮಿಸಿದರೆ ರೋಗಗಳನ್ನು ಪರಿಹರಿಸುವಳು
ಗಿಡ ನೆಟ್ಟರೆ ಭಗವಂತನ ಸಾಮೀಪ್ಯವನ್ನು ನೀಡುವಳು
ಭಗವಂತನ ಪಾದಗಳಿಗೆ ಅರ್ಪಿಸಿದರೆ ಮೋಕ್ಷವನ್ನೇ ನೀಡುವಳು.

ಆಧ್ಯಾತ್ಮಿಕ ಆಧಿದೈವಿಕ-ಆಧಿಭೌತಿಕವಾದ ಸುಖಕ್ಕೆ ಸಾಧನ ಶ್ರೀತುಳಸಿ. ಪದುಮನಾಭನಿಂದ ಪಾಮರನವರೆಗೆ ಎಲ್ಲರ ಕೊರಲ್ಲಿ ಕಂಗೊಳಿಸುವವಳು ಶ್ರೀತುಳಸಿ. ಪೌರ್ವಾತ್ಯರು-ಪಾಶ್ಚಿಮಾತ್ಯರು ಎಲ್ಲರಿಗೂ ಒಂದಿಲ್ಲ ಎಂದು ಕಾರಣಕ್ಕಾಗಿ ಬೇಕಾದವಳು ಶ್ರೀತುಳಸಿ. ಪ್ರಾಯಃ ಎಲ್ಲ ರೋಗಗಳಿಗೆ ಪರಿಹಾರಕ ಶ್ರೀತುಳಸಿ. ಭವರೋಗವನ್ನೇ ಪರಿಹರಿಸುವವಳಿಗೆ ರೋಗಗಳ ಪರಿಹಾರ ಏನಾಶ್ಚರ್ಯ? ವೇದ-ಪುರಾಣ-ಇತಿಹಾಸ-ಕಾವ್ಯ-ಪದ-ಪದ್ಯ-ಸುಳಾದಿಗಳಲ್ಲಿ ಬೆಳೆದು ನಿಂತ ದೇವತಾವೃಕ್ಷ ಶ್ರೀತುಳಸಿ. ಶ್ವೇತದ್ವೀಪದಿಂದ ಜಂಬೂದ್ವೀಪದ ತನಕ ಸುಪ್ರಸಿದ್ಧಳಾದವಳು ಶ್ರೀತುಳಸಿ. ನಿತ್ಯಯೋಗಿಗಳಾಗಿ ಸರ್ವಸಂಗವನ್ನೂ ಪರಿತ್ಯಜಿಸಿದ ಸನಕಾದಿಗಳ ಮನಸ್ಸನ್ನೂ ಕದಡಿದ ಮಹಿಮೆ ಶ್ರೀತುಳಸಿಯದು.
ತುಲಸಿಯ ಪೂಜೆ ದೇವರ ಪೂಜೆ, ತುಲಸಿಯಿಂದ ಮಾಡುವ ಪೂಜೆಯೂ ದೇವರ ಪೂಜೆಯೇ. ತುಲಸಿಯಲ್ಲಿಯ ಎಲ್ಲವೂ ದೇವರಿಗಾಗಿಯೇ, ಮಂಜರೀ, ದಲ, ಎಲೆ, ಕಾಷ್ಠ, ಬೇರು, ಮೃತ್ತಿಕಾ, ಹೆಸರು ಎಲ್ಲವನ್ನೂ ದೇವರಿಗೆ ಅರ್ಪಿಸಿದ್ದಾಳೆ. ಅದೆಲ್ಲವನ್ನೂ ದೇವರು ಒಪ್ಪಿಕೊಂಡಿದ್ದಾನೆ. ಹೀಗೆ ತನ್ನ ಸರ್ವಸ್ವವನ್ನು ದೇವರಿಗೆ ಸಮರ್ಪಿಸಿಕೊಂಡ ಮಹಚ್ಚೇತನ ಶ್ರೀತುಳಸಿ.
ಗೋಪಿಚಂದನವಿಲ್ಲದಿರುವಾಗ ಆ ಸ್ಥಾನದಲ್ಲಿ ತುಲಸೀಮೃತ್ತಿಕೆಯನ್ನು ಉಪಯೋಗಿಸಬಹುದೆಂದು ಸ್ಮೃತಿಗಳು ಸಾರುತ್ತವೆ.ಸರ್ವರೋಗವೈದ್ಯನಾದ ಧನ್ವಂತರಿಯ ಆನಂದಾಶ್ರುಗಳಿಂದ ಅಮೃತದಲ್ಲಿ ಉತ್ಪನ್ನವಾಗಿದೆ ತುಲಸಿ. ತುಲಸಿಯು ನಿತ್ಯೋಪಯೋಗಿಯಾದ ವೃಕ್ಷ. ಸ್ತ್ರೀ, ಪುರುಷ, ಬಾಲ, ವೃದ್ಧ ಎಂಬ ಭೇದವಿಲ್ಲದೇ ಎಲ್ಲರಿಂದ ಪೂಜ್ಯವಾದ ಕಲ್ಪವೃಕ್ಷವಾಗಿದೆ.
ವ್ರತಗಳಲ್ಲಿ ದ್ವಾದಶೀವ್ರತ ಮಹತ್ತ್ವದ ಸ್ಥಾನವನ್ನು ಪಡೆದಿದೆ. ಅರ್ಚನಸಾಧನಗಳಲ್ಲಿ ತುಲಸಿಯ ಪಾತ್ರ ಮಹತ್ತ್ವದ್ದಾಗಿದೆ.ತುಲನಾರಹಿತಳಾದವಳು ತುಲಸೀ, ಅರ್ಚನೆಸಾಧನಗಳಲ್ಲಿ ತುಲಸಿಯ ತುಲನಕ್ಕೆ ಬರುವ ಮತ್ತೊಂದು ಪತ್ರವಾಗಲೀ ಪುಷ್ಪವಾಗಲೀ ಇಡಿಯ ವಿಶ್ವದಲ್ಲಿಯೇ ಇಲ್ಲ, ಹೀಗಾಗಿ ಇದನ್ನು ‘ತುಲಸೀ’ಎಂಬ ನಾಮದಿಂದ ಜ್ಞಾನಿಗಳು ವ್ಯವಹರಿಸಿದ್ದಾರೆ.ಯಾವ ಪ್ರದೇಶದಲ್ಲಿ ಒಂದು ತುಲಸೀವೃಕ್ಷವು ಇರುತ್ತದೋ ಅಲ್ಲಿಯೇ ಬ್ರಹ್ಮ-ವಿಷ್ಣು-ರುದ್ರಾದಿದೇವತೆಗಳೆಲ್ಲರೂ ನೆಲೆಸಿರುತ್ತಾರೆ. ತುಲಸೀ ಎಲೆಯ ಮಧ್ಯಭಾಗದಲ್ಲಿ ಬ್ರಹ್ಮ-ರುದ್ರರಿಗೆ ನಿಯಾಮಕನಾಗಿರುವ ಕೇಶವನು, ಪತ್ರದ ಮೇಲ್ಭಾಗದಲ್ಲಿ ಬ್ರಹ್ಮದೇವರು, ಪತ್ರದ ತೊಟ್ಟಿನಲ್ಲಿ ರುದ್ರದೇವರು ಯಾವಾಗಲೂ ಸನ್ನಿಹಿತರಾಗಿ ಇರುತ್ತಾರೆ.
ತುಲಸೀವೃಕ್ಷದ ಮೂಲಭಾಗದಲ್ಲಿ ಎಲ್ಲ ತೀರ್ಥಗಳು, ಮಧ್ಯಭಾಗದಲ್ಲಿ ಸಕಲದೇವತೆಗಳು, ಮೇಲ್ಭಾಗದಲ್ಲಿ ಎಲ್ಲ ವೇದಗಳು ಸನ್ನಿಹಿತರಾಗಿರುತ್ತಾರೆ. ತುಲಸಿಯ ವನ ಯಾರ ಮನೆಯಲ್ಲಿರುತ್ತದೋ ಆ ಮನೆ ತೀರ್ಥಕ್ಕೆ ಸಮಾನವಾಗಿದೆ. ಅಂತಹ ಮನೆಗೆ ಯಮನ ಕಿಂಕರರು ಪೀಡಿಸಲು ಬರುವುದಿಲ್ಲ.
ವಿಹಿತವಾದ ವೃಕ್ಷಗಳನ್ನು ಬೆಳೆಸುವುದು ಅತಿ ಪುಣ್ಯಪ್ರದವಾದ ಕಾರ್ಯವೆಂದು ಪುರಾಣಗಳು ತಿಳಿಸುತ್ತವೆ. ‘ದಶಪುತ್ರಸಮೋ ವೃಕ್ಷಃ’ ಹತ್ತು ಮಕ್ಕಳಿಗೆ ಸಮವಾದುದು ಒಂದು ವೃಕ್ಷ’ ಎಂಬ ವಚನವಂತೂ ವೃಕ್ಷಾರೋಪಣದ ಮಹತ್ತ್ವವನ್ನು ಬಹಳ ಸ್ಪಷ್ಟವಾಗಿ ತಿಳಿಸುತ್ತದೆ. ಎಲ್ಲ ವೃಕ್ಷಗಳಿಗಿಂತಲೂ ಅಧಿಕವಾದ ತುಲಸಿಯನ್ನು ಬೆಳೆಸುವುದು ಅತಿವಿಶಿಷ್ಟವಾದ ಪುಣ್ಯದ ಕಾರ್ಯ. ಹೀಗಾಗಿ ತುಲಸಿಯನ್ನು ಶ್ರದ್ಧೆಯಿಂದ ಬೆಳೆಸಬೇಕು. ಉದ್ದೇಶಪೂರ್ವಕವಾಗಿ, ಪ್ರಯತ್ನಪೂರ್ವಕವಾಗಿ ತುಲಸಿಯನ್ನು ಮನೆಯಲ್ಲಿ ಬೆಳೆಸಬೇಕು. ಇದರಿಂದ ಪ್ರಾಪ್ತವಾಗುವ ಪುಣ್ಯವನ್ನು ಪುರಾಣಗಳು ಈ ರೀತಿಯಾಗಿ ಸಾರುತ್ತವೆ.
ತುಲಸಿಯನ್ನು ಬೆಳೆಸಲು ಸುಂದರವಾದ ವೃಂದಾವನವನ್ನು ನಿರ್ಮಿಸಬೇಕು. ವೃಂದಾದೇವಿಯೇ ಸ್ವಯಂ ವೃಂದಾವನವಾಗಿದ್ದಾಳೆ ಎಂಬುದನ್ನು ಪುರಾಣಗಳು ನಿರೂಪಿಸುತ್ತವೆ. ತುಲಸೀ ವೃಕ್ಷದ ಜೊತೆಗೆ ಬೆಳೆದಿರುವ ಹುಲ್ಲು ಮೊದಲಾದವುಗಳನ್ನು ತೆಗೆಯುತ್ತಿರಬೇಕು. ಹೀಗೆ ಮಾಡುವುದರಿಂದ ಆ ವ್ಯಕ್ತಿಯ ದೇಹದಲ್ಲಿರುವ ಬ್ರಹ್ಮಹತ್ಯಾದಿಪಾಪಗಳನ್ನು ಪರಮಾತ್ಮ ಕಿತ್ತಿ ಎಸೆಯುತ್ತಾನೆ.ತುಲಸೀಯನ್ನು ಜಲದಿಂದ ಸೇಚನ ಮಾಡುತ್ತಿರಬೇಕು. ಇದಲ್ಲದೇ ಆವಾಗ ಆವಾಗ ತುಲಸಿಗೆ ಹಾಲನ್ನೂ ಹಾಕುತ್ತಿರಬೇಕು. ಹೀಗೆ ಮಾಡಿದವರ ಮನೆಯಲ್ಲಿ ಲಕ್ಷ್ಮಿಯು ಸ್ಥಿರವಾಗಿ ಇರುತ್ತಾಳೆ. ಹಾಲಿನಿಂದ ಮಾತ್ರವಲ್ಲ, ಎಳೆನೀರಿನಿಂದ, ಜೇನುತುಪ್ಪದಿಂದ, ಕಬ್ಬಿನರಸದಿಂದ ತುಲಸೀಯ ಸೇಚನ ಮಾಡಬೇಕೆಂದೂ ಪುರಾಣಗಳು ತಿಳಿಸುತ್ತವೆ.
ತುಲಸಿ ಇರುವ ಪ್ರದೇಶ ಪರಮಪಾವನವಾದ ಕ್ಷೇತ್ರ. ತುಲಸಿಗೆ ಒಂದು ಕಲಶ ನೀರು ಹಾಕಿದರೂ ಸಾಕು. ಅವನ ಪುಣ್ಯವು ಅಭಿವೃದ್ಧವಾಗುತ್ತದೆ. ದಾಂಪತ್ಯವಿಯೋಗ ಸರ್ವಥಾ ಬರಬಾರದೆಂದೇ ಸ್ತ್ರೀಯರಿಗೆ ಪ್ರತಿನಿತ್ಯ ತುಲಸಿಯ ಸೇವೆಯನ್ನು ಶಾಸ್ತ್ರವಿಧಾನ ಮಾಡಿದೆ. ಸ್ನಾನ ಮಾಡದೇ ಪುಷ್ಪಗಳನ್ನು ಸಂಗ್ರಹಿಸಬೇಕು. ಸ್ನಾನ ಮಾಡಿದ ನಂತರವೇ ತುಲಸಿಯನ್ನು ಸಂಗ್ರಹಿಸಬೇಕು. ಅನುಪನೀತರು ಮತ್ತು ಸ್ತ್ರೀಯರು ತುಲಸಿಯನ್ನು ತೆಗೆಯಬಾರದು.
ವೈಧೃತಿ ಮತ್ತು ವ್ಯತೀಪಾತ ಯೋಗಗಳಲ್ಲಿ ಮಂಗಳವಾರ, ಶುಕ್ರವಾರ ಮತ್ತು ರವಿವಾರ ದಿನಗಳಲ್ಲಿ, ಹುಣ್ಣಿಮೆ ಮತ್ತು ಅಮಾವಾಸ್ಯದಿನದಲ್ಲಿ ಸಂಕ್ರಾಂತಿಯ ದಿನದಂದು, ದ್ವಾದಶೀಯ ದಿವಸ ಮತ್ತು ಜನನ ಮರಣ ಸೂತಕಗಳಲ್ಲಿ ತುಲಸೀಚಯನ ಮಾಡಬಾರದು. ಈ ದಿವಸಗಳನ್ನು ಪರಿತ್ಯಜಿಸಿ ಉಳಿದ ದಿವಸಗಳಲ್ಲಿ ತುಲಸಿಯನ್ನು ಚಯನ ಮಾಡಬೇಕು. ಇದರಿಂದ ತನ್ನ ಜೀವನ ಯಾವುದೇ ರೀತಿಯ ವಿನಾಶಕ್ಕೆ ಒಳಗಾಗುವುದಿಲ್ಲ.
ತುಲಸೀ ಇಲ್ಲದ ಪೂಜೆಯನ್ನು ಪರಮಾತ್ಮ ಸ್ವೀಕರಿಸಲಾರ ಎಂದು ಶಾಸ್ತ್ರಗಳು ತಿಳಿಸುತ್ತವೆ. ಮತ್ತು ತುಲಸಿ ಇಲ್ಲದಿರುವಾಗ ತುಲಸಿಯ ಸ್ಮರಣೆಯನ್ನಾದರೂ ಮಾಡಬೇಕೆಂದು ಸ್ಮೃತಿಗಳು ತಿಳಿಸುತ್ತವೆ. ಮುತ್ತಗದ ಹೂ ಒಂದು ದಿನ, ಕಮಲ ಮೂರುದಿನ, ಬಿಲ್ವಪತ್ರ ಐದುದಿನ, ಮತ್ತು ತುಲಸಿ ಹತ್ತುದಿನಗಳವರೆಗೆ ನಿರ್ಮಾಲ್ಯವೆನಿಸುವುದಿಲ್ಲ.
ದೇವರನ್ನು ಉಪಚರಿಸಲು ನಾವೆಲ್ಲ ದೇವರ ಪ್ರತಿಮೆಗಳನ್ನು, ಶಾಲಗ್ರಾಮಗಳನ್ನು ಇಟ್ಟುಕೊಂಡು ಕೂಡುತ್ತೇವೆ. ಆದರೆ ಅಲ್ಲಿ ನಡೆಯುವುದು ಉಪಚಾರವಲ್ಲ ಅಪಚಾರಗಳೇ ನಡೆದು ಹೋಗುತ್ತವೆ. ಉಪಚಾರಗಳಿಗೆ ದುಪ್ಪಟ್ಟು ಅಪಚಾರಗಳು ನಡೆದು ಹೋಗುತ್ತವೆ. ಆದರೆ ತುಲಸಿಯಿಂದ ದೇವರನ್ನು ಅರ್ಚಿಸಿದಲ್ಲಿ, ಆ ಮೂವತ್ತೆರಡು ಅಪರಾಧಗಳನ್ನು ಭಗವಂತ ಕ್ಷಮಿಸುತ್ತಾನೆ. ಶುಕ್ಲ-ಕೃಷ್ಣ ಏಕಾದಶಿಯಲ್ಲಿ ಯಾವುದೇ ರೀತಿಯಾದ ಭೇದವಿಲ್ಲ. ಶುಕ್ಲ-ಕೃಷ್ಣ ಗೋವಿನಲ್ಲಿ ಯಾವುದೇ ರೀತಿಯಾದ ಭೇದವಿಲ್ಲ. ಅದೇ ರೀತಿಯಾಗಿ ರಾಮತುಲಸಿ ಕೃಷ್ಣತುಲಸಿಯಲ್ಲಿ ಭೇದವಿರುವುದಿಲ್ಲ.
ಆಯಾ ಋತುವಿನಲ್ಲಿ ಬೆಳೆಯುವ ಪುಷ್ಪಗಳನ್ನೇ ದೇವರಿಗೆ ಸಮರ್ಪಿಸಬೇಕು. ಅಕಾಲದಲ್ಲಿ ಬೆಳೆದ ಪುಷ್ಪಗಳನ್ನು ದೇವರಿಗೆ ಎಂದಿಗೂ ಸಮರ್ಪಿಸಬಾರದು. ಆದರೆ ತುಲಸಿಯ ವಿಷಯದಲ್ಲಿ ಈ ನಿಯಮವಿಲ್ಲ. ತುಲಸಿಯ ಸಮರ್ಪಣೆಗೆ ಅಕಾಲವೆಂಬುದು ಯಾವುದೂ ಇಲ್ಲ.
ತುಲಸೀಪತ್ರಗಳಿಂದ ಗಣಪತಿಯನ್ನು ಪೂಜಿಸಬಾರದೇಂಬ ವಚನ ಯಥಾರ್ಥವೇ ಆಗಿದೆ. ಆದರೆ ಏಕವಿಂಶತಿ ಪತ್ರಪೂಜೆಯಲ್ಲಿ ಮಾತ್ರ ಮೇಲೆ ಉಕ್ತವಾಗಿರುವ ಮಂತ್ರದಿಂದ ಗಣಪತಿಯನ್ನು ಅವಶ್ಯವಾಗಿ ಪೂಜಿಸಬೇಕು. ಇದರ ಹೊರತು ಮತ್ತಾವ ಪ್ರಸಂಗದಲ್ಲಿಯೂ ಗಣಪತಿಯನ್ನು ತುಲಸಿಯಿಂದ ಅರ್ಚಿಸಬಾರದು. ಯತಿಗಳಿಗೆ ತುಲಸೀ ಪುಷ್ಪಗಳನ್ನು ಚಯನ ಮಾಡುವ ಅಧಿಕಾರವಿರುವುದಿಲ್ಲ, ಆದರೆ ದೇವರ ಪೂಜೆಯನ್ನು, ಅರ್ಚನೆಯನ್ನು ತಪ್ಪಿಸುವ ಹಾಗಿಲ್ಲ. ಆದರೆ ಮತ್ತೊಬ್ಬರು ತಂದುಕೊಟ್ಟಿರುವ ತುಲಸೀಪುಷ್ಪಗಳಿಂದ ಅವಶ್ಯವಾಗಿ ಅವರು ದೇವರನ್ನು ಅರ್ಚಿಸಬಹುದು. ಯಾರೂ ತುಲಸೀ ಪುಷ್ಪಗಳನ್ನು ತಂದು ಕೊಡದಿದ್ದ ಪಕ್ಷದಲ್ಲಿ ತುಲಸಿಯನ್ನು ಸ್ಮರಿಸುತ್ತಾ ಅಹಿಂಸಾದಿ ಅಷ್ಟಭಾವಪುಷ್ಪಗಳಿಂದ ಪರಮಾತ್ಮನನ್ನು ಅರ್ಚಿಸಬೇಕು ಎಂದು ಶಾಸ್ತ್ರವು ತಿಳಿಸುತ್ತದೆ.ಆದ್ದರಿಂದ ಅಂತಹ ಯತಿಗಳಿಗೆ ತುಲಸಿ-ಪುಷ್ಪಗಳನ್ನು ನೀಡುವುದರಿಂದ ಅನಂತವಾದ ಫಲವು ಪ್ರಾಪ್ತವಾಗುತ್ತದೆ.
ಮನೆಯಲ್ಲಿ ಸಾಕಷ್ಟು ತುಲಸಿ ಇರುತ್ತದೆ. ನಿತ್ಯವೂ ಶ್ರೀಹರಿಯನ್ನು ಅರ್ಚಿಸುವ ಪೂಜಕರಿಗೆ ಆ ತುಲಸಿಯನ್ನು ದಾನಮಾಡಬೇಕು. ಹೀಗೆ ಯತಿಗಳಿಗೆ ಮತ್ತು ಗೃಹಸ್ಥರಾದ, ಬ್ರಹ್ಮಚಾರಿಗಳಾದ ವಿಷ್ಣುಭಕ್ತರಿಗೆ ತುಲಸಿಯನ್ನು ದಾನ ಮಾಡುವುದರಿಂದ ನಾಶರಹಿತವಾದ ವೈಕುಂಠಾದಿಲೋಕಗಳು ಲಭ್ಯವಾಗುತ್ತವೆ. ಅಲ್ಲಿ ಪರಮಾತ್ಮನನ್ನು ಅರ್ಚಿಸುತ್ತ ಸುಖಿಸುತ್ತಾನೆ.
ಕಾರ್ತಿಕಶುಕ್ಲಪಕ್ಷದ ದ್ವಾದಶಿ ದೇವರ ಉತ್ಥಾನದ ದಿನ. ಚಾತುರ್ಮಾಸ್ಯದ ಮುಕ್ತಾಯದ ದಿನ. ಹಿಂದಿನ ದಿನವಾದ ಏಕಾದಶಿಯಲ್ಲಿ ವಿಶೇಷವಾಗಿ ಜಾಗರಣೆಯನ್ನು ಮಾಡಬೇಕು. ತುಪ್ಪ, ಹೆಸರು, ಬೆಲ್ಲ, ಹಾಲು ಇವುಗಳಿಂದ ಯುಕ್ತವಾದ ಅನ್ನವನ್ನು ದೇವರಿಗೆ ದ್ವಾದಶಿಯಂದು ನಿವೇದಿಸಬೇಕು ಕಾರ್ತಿಕಮಾಸದಲ್ಲಿ ಪ್ರತಿನಿತ್ಯವೂ ಪ್ರಾತಃಕಾಲ ಸಾಯಂಕಾಲ ವಿಶೇಷವಾದ ದೀಪಗಳಿಂದ ತುಲಸಿಯನ್ನು ಉಪಚರಿಸಬೇಕು. ಸಾಯಂಕಾಲದಲ್ಲಿ ಮತ್ತಷ್ಟು ವಿಶೇಷವಾದ ರೀತಿಯಲ್ಲಿ ದೀಪಾರಾಧನೆಯನ್ನು ಮಾಡಬೇಕು. ತುಲಸೀವನದ ನೆರಳಿನಿಂದ ಯುಕ್ತವಾಗಿರುವ ಪ್ರಾಂತ ಪಿತೃಗಳಿಗೆ ಪ್ರಿಯವಾಗಿದೆ. ಆದ್ದರಿಂದ ಪ್ರಯತ್ನಪೂರ್ವಕವಾಗಿ ಇಂತಹ ಸ್ಥಳದಲ್ಲಿ ಶ್ರಾದ್ಧವನ್ನು ಮಾಡಬೇಕು. ಇದರಿಂದ ಪಿತೃಗಳು ತೃಪ್ತರಾಗುತ್ತಾರೆ.

-ಗುರುರಾಜ ಪೋಶೆಟ್ಟಿಹಳ್ಳಿ ,
ಯುವ ಆಧ್ಯಾತ್ಮ ಚಿಂತಕರು – ೯೦೩೫೬೧೮೦೭೬
fbf17e88-00d4-4be2-8c57-3b0ac160893b