ಸರಿ ಸುಮಾರು ನಾ...

ಸರಿ ಸುಮಾರು ನಾಲ್ಕು ಸಾವಿರ ಯಶಸ್ವಿ ಹೆರಿಗೆಗಳನ್ನು ಮಾಡಿದ ಮಾತೃಹೃದಯ:ವೈದ್ಯಲೋಕದ ತಾರೆ ಡಾ|| ಜಮೀಲಾ ಖಲೀದ್

84
0
SHARE

dr-jameela1
ಅಚ್ಯುತಾಯ ನಮಃ|
ಅನಂತಾಯ ನಮಃ|
ಗೋವಿಂದಾಯ ನಮಃ|

ಅಚ್ಯುತಾನಂತ ಗೋವಿಂದ |
ನಾಮೋಚ್ಚಾರಣ ಬೇಷಜಾತ್|
ನಶ್ಯಂತಿ ಸಕಲಾ ರೋಗಾಃ ಸತ್ಯಂ|
ಸತ್ಯಂ ವದಾಮ್ಯಹಮ್|

ಶರೀರೇ ಜರ್ಜರಿಭೂತೇ|
ವ್ಯಾದಿಗ್ರಸ್ತೇ ಕಲೇವರೇ|
ಔಷಧಂ ಜಾಹ್ನವೀತೋಯಂ|
|| ವೈದ್ಯೊ ನಾರಾಯಣೋ ಹರಿಃ ||
dhanvantari

“ಮದುವೆಯಾಗಿ ಇಲ್ಲಿಗೆ ಬಂದೆ, ತುಂಬಾ ಜನನಿಬಿಡ ಪ್ರದೇಶ, ಆಗ ಇಲ್ಲಿ ಒಂದು ಒಂದೇ ಒಂದು ಕ್ಲಿನಿಕ್ ಇತ್ತು. ಉಷಾ ಕ್ಲಿನಿಕ್. ಅಲ್ಲಿದ್ದವರು ಮೇಲ್ ಡಾಕ್ಟರ್. ನೂರಾರು ಗರ್ಬಿಣಿಯರು, ಸ್ಲಂ ಬೇರೆ, ಜನಗಳ ಬಳಿ ದೊಡ್ಡ ಆಸ್ಪತ್ರಗೆ ಹೋಗೋಕೆ ಅಷ್ಟು ಹಣ ಕೂಡ ಇಲ್ಲ, ನಾನು ತಡ ಮಾಡ್ಲೇ ಇಲ್ಲ, ನಮ್ಮೆಜಮಾನ್ರು ನಾನು ಒಂದು ವಾರ ಇಡೀ ಏರಿಯಾ ಸುತ್ತಿದ್ವಿ, ಜಾಗ ಹುಡುಕೋಕೆ, ೧೯೯೦ರಲ್ಲಿ ಶುರುವಾಯ್ತು ಕುಬ್ರಾ ಕ್ಲಿನಿಕ್. ಒಂದೇ ಬೆಡ್, ಚಿಕ್ಕ ಕೋಣೆ, ಅಲ್ಲೇ ಕೂರ್ತಿದ್ದೇ, ಅಲ್ಲೇ ತಪಾಸಣೇ ಮಾಡ್ತಿದ್ದೆ. ಈಗ ಆಪರೇಷನ್ ಥಿಯೇಟರ್, ಲೇಬರ್ ರೂಂ, ಕನ್ಸಲ್ಟಿಂಗ್ ರೂಮ್ಸ್, ವ್ಯವಸ್ಥಿತ ಲ್ಯಾಬ್, ಸ್ವಂತ ಮೆಡಿಕಲ್ ಸ್ಟೋರ್, ೨೦ ಬೆಡ್‌ಗಳು, ಮೂರು ಸ್ಪೆಷಲ್ ವಾರ್ಡಗಳ ಆಸ್ಪತ್ರೆ. ಎಲ್ಲವು ೨೬ವರ್ಷಗಳ ಬದಲಾವಣೆ. ಬದಲಾಗಿರೋದು ಕಟ್ಟಡ ಮಾತ್ರ, ನಾವಲ್ಲ. ನೀವು ಈಗ ಕುಳಿತಿದ್ದೀರಲ್ಲ, ನಿಮ್ಮ ಹಿಂದೆ ಇರೋ ಬೆಡ್ಡೇ ನಮ್ಮ ಕ್ಲಿನಿಕ್‌ನ ಮೊಟ್ಟ ಮೊದಲ ಬೆಡ್. ನಮ್ಮೆಜಮಾನ್ರು ಸ್ವತಃ ಅವರೇ ಕಾರ್ಪೇಂಟರಿ ಮಾಡಿಕೊಟ್ಟಿದ್ದು. ಆ ನೆನಪಿಗೆ ಹಾಗೇ ಇಟ್ಟುಕೊಂಡಿದ್ದೀನಿ. ಎನ್ನುತ್ತಾ ಅವರ ಪರ್ಸನಲ್ ಕನ್ಸ್‌ಲ್ಟಿಂಗ್ ರೂಂನಲ್ಲಿ ಅವರೆದುರು ಸಂದರ್ಶನಕ್ಕಾಗಿ ಕುಳಿತ ನನಗೆ ತೋರಿಸಿದರು, ಮುಟ್ಟಿ ನೋಡಿದೆ, ರೋಮಾಂಚನಗೊಂಡೆ. ಆಗ ಐದು ಹತ್ತು ರೂಪಾಯಿಯಿಂದ ಪ್ರಾರಂಭ ಆಯ್ತು, ಈಗಲೂ ಐವತ್ತು ನೂರರಲ್ಲೇ ಹೋಗ್ತಾ ಇದೆ. ನಾನು ಯಾವ ಪೇಷೆಂಟ್‌ಗೂ ಇಷ್ಟೇ ಕೊಡಿ, ಅಷ್ಟೇ ಕೊಡಿ ಅಂತ ಡಿಮ್ಯಾಂಡ್ ಮಾಡೊಲ್ಲ, ವರ್ಷಕ್ಕೆ ಆವರೇಜ್ ೨೫೦ ರಿಂದ ಮುನ್ನೂರು ಹೆರಿಗೆ ಮಾಡಿರಬಹುದು, ನೀವೇ ಲೆಕ್ಕ ಹಾಕ್ಕೋಳ್ಳಿ!” ಕಿಂಚಿತ್ತು ಅಹಂಕಾರವಿಲ್ಲದ, ಮಾತೃಹೃದಯಿಯ ಬಾಯಿಂದ ಬಂದ ಮಾತುಗಳಿವು. ಈ ಮಾತುಗಳನ್ನಾಡುವಾಗ ಅವರಿಬ್ಬರ ಕಣ್ಣುಗಳಲ್ಲಿ ಸಾರ್ಥಕತೆಯ ನಿರಾಳ ಭಾವವು ಕಣ್ಣೀರಿನ ರೂಪದಲ್ಲಿ ತುಂಬಿತ್ತು. ಆದರೆ, ಹೊರಗೆ ಬರಲಿಲ್ಲ. ಡಾ||ಜಮೀಲಾ ಖಲೀದ್ ಹಾಗೂ ಶ್ರೀ ಖಲೀದ್ ದಂಪತಿಗಳನ್ನು ನೋಡಿ ನಾನಂತು ಮೂಕನಾಗಿದ್ದೇ! ಅವರಿಬ್ಬರ ವ್ಯಕ್ತಿತ್ವಕ್ಕೆ ಶರಣಾಗಿದ್ದೆ!..
– ಜರಗನಹಳ್ಳಿ ಕಾಂತರಾಜು

ಕುಬ್ರಾ ಮೆಟರ್ನಿಟಿ ಮತ್ತು ನರ್ಸಿಂಗ್ ಹೋಂ
ಈ ಪತ್ರಿಕೋಧ್ಯಮವೇ ಅಂತದ್ದು! ಪ್ರತಿನಿತ್ಯ ಹೊಸ ಜನಗಳು, ಹೊಸ ಪರಿಚಯ. ಸಾಮಾನ್ಯರಂತೆ ಬದುಕುವ ಅಸಾಧಾರಣಾ ವ್ಯಕ್ತಿತ್ವಗಳೊಡನೆ ಸಂದರ್ಶನ. ನಾನು ಸಹ ಬಹಳಷ್ಟು ಜನ ಸಾಧಕರನ್ನು ಕಂಡಿದ್ದೇನೆ, ಮಾತನಾಡಿಸಿದ್ದೇನೆ, ಅವರೊಂದಿಗೆ ಸಮಯ ಕಳೆದು ಅನೇಕ ವಿಚಾರಗಳನ್ನು ತಿಳಿದುಕೊಳ್ಳೋ ಪ್ರಯತ್ನ ಮಾಡಿದ್ದೇನೆ. ಒಬ್ಬೊರಿಗಿಂತ ಒಬ್ಬರು ನನ್ನ ಕಣ್ಣಿಗೆ ದೊಡ್ಡವರಾಗಿಯೇ ಕಾಣ್ತಾ ಹೋಗ್ತಾರೆ. ಅವರೆಲ್ಲರನ್ನು ಒಂದು ಕ್ಷಣ ಮರೆಸಿಬಿಟ್ಟಿದ್ದು ಅಂದರೆ ಬನ್ನೇರುಘಟ್ಟ ರಸ್ತೆಗೆ ಅಂಟಿಕೊಂಡಿರುವ ಗುರಪ್ಪನಪಾಳ್ಯದ, ಮಸೀದಿ ಮುಂದಿನ ಕಿರಿದಾದ ರಸ್ತೆಯಲ್ಲಿರುವ ಕುಬ್ರಾ ನರ್ಸಿಂಗ್ ಹೋಂನ “ಡಾ||ಜಮೀಲಾ ಖಲೀದ್”. ಹೀಗೆ ಇವರೊಟ್ಟಿಗೆ ಕುಳಿತು ಮಾತನಾಡ್ತಾ ಇದ್ದ ಹಾಗೇ ನನ್ನ ಮನಸ್ಸು ಒಂದು ನಿರ್ಧಾರಕ್ಕೆ ಸಿದ್ದವಾಗಿತ್ತು. ಅದೇನೆಂದರೇ, ಸಾಮಾನ್ಯವಾಗಿ ನಾವು ಯಾರನ್ನಾದರೂ ಸಂದರ್ಶನ ಮಾಡಿದ್ರೆ, ಅವರ ಕ್ಷೇತ್ರದ ಸಂಪೂರ್ಣ ವಿವರಗಳು ಮತ್ತು ನಡೆದು ಬಂದ ದಾರಿ, ಪಟ್ಟ ಕಷ್ಟಗಳು ಹೀಗೆ ಎಲ್ಲ ಮಾಹಿತಿಗಳನ್ನು ದಾಖಲಿಸಿ ಆವ್ಯಕ್ತಿಯನ್ನು ಸ್ವಲ್ಪ ಮಟ್ಟಿಗೆ ವೈಭವೀಕರಿಸುತ್ತಾ, ಒಂದು ಲೇಖನವನ್ನು ಸಿದ್ದಮಾಡ್ತೀವಿ. ಆದರೆ, ಅಂತಹ ಲೇಖನಗಳಲ್ಲಿ ಪ್ರಮುಖವಾಗಿ ಅವರ ಯಶಸ್ಸಿ ನಿಜವಾದ ಗುಟ್ಟನ್ನು ಕೆದಕೋ ಪ್ರಯತ್ನ ನಾವು ಮಾಡೋಲ್ಲ, ಸಾಮಾನ್ಯವಾಗಿ ಅವರವರ ಯಶಸ್ಸಿನ ಗುಟ್ಟನ್ನು ಅವರು ಸಹ ಹೇಳೋಲ್ಲ. ಆದರೆ. “ಡಾ||ಜಮೀಲಾ ಖಲೀದ್”. ದಂಪತಿಗಳ ಈ ಸಂದರ್ಶನವನ್ನು ನಾನು ಈ ವ್ಯಕ್ತಿಗಳ ಸುಖಾಸುಮ್ಮನೆ ವೈಭವೀಕರಣಕ್ಕಿಂತ ಇವರ ಜೀವನದ ಯಶಸ್ಸಿನ ಗುಟ್ಟನ್ನು ಆದಷ್ಟೂ ಕೆದಕಿ ದಾಖಲು ಮಾಡೋ ಪ್ರಯತ್ನವನ್ನು ಸಂದರ್ಶನದ ವೇಳೆ ಮಾಡಿದೆ. ಕಾರಣ, ಸದಾ ಈಸಿ ಗೋಯಿಂಗ್, ಈಸಿ ಮನಿ ಮತ್ತೆ ಈಸಿ ಸಕ್ಸಸ್ ಹುಡುಕುತ್ತಾ ಭ್ರಮೆಯಲ್ಲಿರೋ ನಮ್ಮ ಲಕ್ಷಾಂತರ ಯುವಕರುಗಳಿಗೆ, ಸಾಮರಸ್ಯವನ್ನು ಕಳೆದುಕೊಂಡ ಎಷ್ಟೋ ಗಂಡ-ಹೆಂಡತಿಯರಿಗೆ ಮತ್ತು ಈ ಸಮಾಜಕ್ಕೂ ನಮಗೂ ಸಂಭಂಧವೇ ಇಲ್ಲವೇನೋ ಎಂಬಂತೆ ವರ್ತಿಸುವ ಟೆಕ್ಕಿಗಳಿಗೂ, ಈ ಆದರ್ಶ ದಂಪತಿಗಳ ಸ್ಟೋರಿ ಇಂಟೆರೆಸ್ಟಿಂಗ್ ಇನ್ಸ್ಪಿರೇಷನ್ ಅಂಡ್ ಪ್ರಾಕ್ಟಿಕಲ್ ಟಾನಿಕ್ ಆದ್ರೂ ಆಗಬಹುದು ಅಂತಾ ಇವರ ಸಾಧನೆಯನ್ನು ಬಿಟ್ಟು ನೇರವಾಗಿ ಇವರ ವ್ಯಕ್ತಿತ್ವದ ಕುರಿತ ವಸ್ತುವನ್ನೇ ಈ ಲೇಖನದ ಮೂಲ ಧಾತುವನ್ನಾಗಿ ಬಳಸುತ್ತಿದ್ದೇನೆ.
ವೃತ್ತಿಯಲ್ಲಿ ವೈಧ್ಯೆ. ಮನಸ್ಸು ಮಾಡಿದ್ದರೆ ಹಣ ಕೊಳ್ಳೆ ಹೊಡೆಬಹುದಾಗಿತ್ತು, ಆದರೆ, ಇವರ ಆಸ್ಪತ್ರೆ ಇರೋ ಏರಿಯಾ ನೋಡಿದ್ರೆನೆ ಗೊತ್ತಾಗುತ್ತೆ, ಇವರು ಬೇರೆಯವರ ತರಹ ದುಬಾರಿ ವೈದ್ಯರಲ್ಲ ಅಂತ. ಅಥವಾ ಇವರು ಹಣ ಮಾಡೋಕೆ ಇಲ್ಲಿ ಇರೋರಲ್ಲ ಅಂತ. ಸುಮಾರು ನಾಲ್ಕು ಬಾರಿ “ಡಾ||ಜಮೀಲಾ ಖಲೀದ್” ಅವರನ್ನು ಕಾಣಲು ಇವರ ಕುಬ್ರಾ ನರ್ಸಿಂಗ್ ಹೋಂಗೆ ಹೋಗಿ ಬಂದಿದ್ದೇನೆ. ಕಾಲು ಇಡಲು ಜಾಗವಿಲ್ಲದಷ್ಟು ಜನ ಇವರ ಸಂದರ್ಶನಕ್ಕಾಗಿ ಕಾಯ್ತಾ ಇದ್ರು. ಹಾಗೇ ಮಾತಾನಾಡ್ತ ಅಲ್ಲಿ ಒಬ್ಬ ಹುಡುಗನ್ನ ಕೇಳ್ದೇ, ಏನಪ್ಪ ಇವತ್ತು ಇಷ್ಟೋಂದು ರಷ್ ಅಂತ ಅದಕ್ಕೆ ಅವನು ಹೇಳ್ದಾ”ಇಲ್ಲಾ ಸಾರ್ ತುಂಬಾ ವರ್ಷದಿಂದ ಪ್ರತಿದಿನ ಹೀಗೆ ಇರುತ್ತೆ ಆದ್ರೆ ಇವತ್ತೆ ಸ್ವಲ್ಪ ಕಡಿಮೆ ಜನ” ಅಂದ. ಹೀಗೇ ಇಷ್ಟೋಂದು ಜನರ ವಿಶ್ವಾಸ-ನಂಬಿಕೆ ಗಳಿಸೋದು ಅಂದ್ರೆ ಸುಮ್ನೇನಾ. ಇವರನ್ನು ಹುಡುಕಿಕೊಂಡು ದೂರದ ಯಲಹಂಕ, ದೊಡ್ಡಬಳ್ಳಾಪುರ, ಹೊಸೂರು, ಆನೇಕಲ್ಲು ಹೀಗೇ ಅನೇಕರು ಪತಿಮಹಾಷಯರುಗಳು ತಮ್ಮ ತಮ್ಮ ಗರ್ಬಿಣಿ ಪತ್ನಿಯರನ್ನು, ತಾಯಿ ತಮ್ಮ ಗರ್ಬಿಣಿ ಮಗಳನ್ನು ಕರೆದುಕೊಂಡು ರೆಗ್ಯುಲರ್ ಪರಿಕ್ಷೇ ಮಾಡಿಸಲು ಬರ‍್ತಾರೆ. ಇವರ ಇನ್ನೊಂದು ವಿಶಿಷ್ಟತೆ ಅಂದ್ರೆ ಅದೆಷ್ಟೋ ತಾಯಂದಿರಿಗೂ, ಅವರ ಮಕ್ಕಳಿಗೂ ಇವರೇ ಹೆರಿಗೆ ಮಾಡಿಸಿರೋದು. ಸೋ ಸೆಕೆಂಡ್ ಜನರೇಷನ್ ಈಗ ಇವರ ಕೈಲಿ ಹೆರಿಗೆ ಆಗ್ತಾ ಇದೆ. ಇವರ ಕೈಗುಣಕ್ಕೆ ನಿಜವಾಗಿಯೂ ಸಾಷ್ಟಾಂಗ ಪ್ರಣಾಮಗಳು.

ದೇರ್ ಈಸ್ ನೋ ಸಬ್ಸ್ಟಿಟ್ಯೂಟ್ ಫಾರ್ ಹಾರ್ಡ್‌ವರ್ಕ, ಪೇಷನ್ಸ್ ಅಂಡ್ ಡೆಡಿಕೇಷನ್:
ಈ ಮೊದಲೇ ತಿಳಿಸಿದಂತೆ ೧೯೯೦ರಲ್ಲಿ ಅತ್ಯಂತ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಕುಬ್ರಾ ಕ್ಲಿನಿಕ್ “ಡಾ||ಜಮೀಲಾ ಖಲೀದ್” ಹಾಗೂ ಇವರ ಪತಿ ಶ್ರೀ ಖಲೀದ್‌ರವರ ತಾಳ್ಮೆ, ಪರಿಶ್ರಮ ಹಾಗೂ ಸಮಾಜಮುಖಿಯಾಗಿ ಇವರಲ್ಲಿರುವ ಸೇವಾ ಮನೋಭಾವದಿಂದ ನಿಧಾನವಾಗಿ ಜನರ ಮನಸ್ಸನ್ನು ಗೆಲ್ಲುತ್ತಾ, ಹಂತ ಹಂತವಾಗಿ ಬೆಳೆದು ನಿಂತಿದೆ. ಈಗ ಬೇಕಾದರೂ ಅವರು ತಮ್ಮ ಆಸ್ಪತ್ರೆಯನ್ನು ಬೇರೆ ಕಮರ್ಷಿಯಲ್ ಬಡಾವಣೆಗಳಿಗೆ ಸ್ಥಳಾಂತರಿಸಬಹುದು, ಹಣಗಳಿಸಬಹುದು, ಆದರೆ, “ಡಾ||ಜಮೀಲಾ ಖಲೀದ್”ರವರು ಹೇಖುವ ಮಾತುಗಳೆ ಬೇರೆ, “ಇನ್ನೂ ಹಲವಾರು ಸರ್ಜನ್‌ಗಳನ್ನು ಇಲ್ಲಿ ಕರೆಯಿಸಬೇಕು, ನಮ್ಮ ಈ ಜನಗಳಿಗೆ ಎಲ್ಲಾ ತರಹದ ವೈದ್ಯಕೀಯ ಸೌಲಭ್ಯಗಳು ದೊರೆಯುಂತೆ ಮಾಡಬೇಕು” ಅಂತ. ಇದೇ ಅಲ್ವ ಮಾತೃ ಹೃದಯ ಅಂದ್ರೆ. ೧೯೯೦ರ ಸಮಯದಲ್ಲಿ ಮನೆಗಳಲ್ಲಿಯೇ ಹೆರಿಗೆಗಳು ಆಗ್ತಾ ಇದ್ವು, ಆಗ ನಾನು ಹೆರಿಗೆ ಮಾಡಿಸೋಕೆ ಹೋದ್ರೆ, ನಮ್ಮೆಜಮಾನ್ರು ಇಡೀ ರಾತ್ರಿಯೆಲ್ಲಾ ಅವರ ಮನೆ ಮುಂದೆ ಕಾಯ್ತಾ ಇರ‍್ತಿದ್ರು, ಈ ತರಹ ಈಗ ಗಂಡ ಹೆಂಡತಿಯರಲ್ಲಿ ಒಬ್ಬೊರಿಗೊಬ್ಬರು ವೃತ್ತಿಯಲ್ಲಿ ಸಹಾಯ ಮಾಡೋದು ಕಡಿಮೆ. ನಂತರ ನಾನು ಚಿಕ್ಕ ಕ್ಲಿನಿಕ್‌ನಲ್ಲಿ ಇದ್ದಾಗ ನನ್ನ ಸಹಾಯಕ್ಕೆ ಇಬ್ಬ ಆಯಾ ಇದ್ದರು, ಈ ಬಡಾವಣೆನಲ್ಲಿ ದೊಡ್ಡ ಆಸ್ಪತ್ರೆ ಮಾಡೋಕೆ ಅಂತ ನಿರ್ಧರಿಸಿದ್ವಿ, ಆಗ ನಮಗೆ ಹಣದ ಕೊರತೆ ಎದುರಾಯಿತು. ಅಂತಹ ಸಂಧರ್ಭದಲ್ಲಿ ನಮ್ಮೆಜಮಾನ್ರು ದೂರದ ದುಬೈಗೆ ಹೋಗಿ ಸುಮಾರು ವರ್ಷ ದುಡಿದು ನನಗೆ ಹಣ ಕಳಿಸ್ತಿದ್ರು, ಹಾಗೇ ಇವರು ಮತ್ತು ನಾನು ಸೇರಿ ದುಡಿದ ಹಣದಲ್ಲಿ ಈ ಆಸ್ಪತ್ರೆ ಕಟ್ಟಿದ್ವಿ ಅಂತ ತಮ್ಮ ಮೆಚ್ಚಿನ ಪತಿಯ ಬಗ್ಗೆ ಹೇಳುವಾಗ ಅವರ ಧ್ವನಿಯಲ್ಲಿ ಹೆಮ್ಮೆಯಿತ್ತು. ಶ್ರೀ ಖಲೀದ್‌ರವರು ಸಹ ಡಾ||ಜಮೀಲಾ ಖಲೀದ್‌ರವರ ಈ ಪಯಣದಲ್ಲಿ ತಮ್ಮನ್ನು ತಾವೇ ಅರ್ಪಿಸಿಕೊಂಡು ದುಡಿದು ತನ್ನ ಪತ್ನಿಯ ಈ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ನಿಜವಾದ ಸಂಸಾರದ ಅರ್ಥವನ್ನು ಇವರಿಂದ ನಾವುಗಳು ಕಲಿಯಬೇಕಾಗಿದೆ. ಏಕೆಂದರೇ, ಗಂಡನಿಗೆ ಸಂಪಾದನೆ ಇಲ್ಲ ಎಂಬ ಕಾರಣಕ್ಕೆ ಅಥವಾ ಹೆಂಡತಿ ದುಡಿಯುವುದಿಲ್ಲ ಎಂಬ ಕಾರಣಕ್ಕೆ ಅದಷ್ಟೋ ಕುಟುಂಬಗಳು ಮುರಿದು ಬಿದ್ದಿರುವ ನಿದರ್ಶನಗಳಿವೆ. ಇನ್ನೂ ಇವರ ಇವರ ಮಾತುಗಳಲ್ಲೇ ಹೇಳುವುದಾದರೇ” ಹನಿ ಹನಿಗೂಡಿದರೇ ಹಳ್ಳ” ಎಂಬಂತೆ ರೂಪಾಯಿ ರೂಪಾಯಿ ಸೇರಿಸಿ ಈ ಸಂಸ್ಥೆಯನ್ನು ಕಟ್ಟದ್ದಾಗಿ ಆತ್ಮವಿಶ್ವಾಸದಿಂದ ನುಡಿಯುತ್ತಾರೆ. ಇದು ನಮ್ಮ ಯುವಕರುಗಳು ಕೇಳಿ, ನೋಡಿ ತಿಳಿದುಕೊಳ್ಳಬೇಕು. ಎಲ್ಲರಲ್ಲೂ ಆತುರ, ದಿಡೀರ್ ಶ್ರೀಮಂತರಾಗಿ ಬಿಡಬೇಕು, ರಾತ್ರೋರಾತ್ರಿ ಹಣಗಳಿಸಿಬಿಡಬೇಕು ಎನ್ನುವ ಭ್ರಮೆಗಳಿಗೆ ಸಿಲುಕಿ ತಪ್ಪುದಾರಿ ತುಳಿಯುವ ಯುವಕರು ಈ ದಂಪತಿಗಳಿಂದ ತಾಳ್ಮೆ ಮತ್ತು ಪರಿಶ್ರಮವನ್ನು ಕಲಿಯಬಹುದು. ಮತ್ತೊಂದೆಡೆ, ಸತತ ಹಲವಾರು ಇಪ್ಪತ್ತಾರು ವರ್ಷಗಳಿಂದ ತಮ್ಮ ವೈಯುಕ್ತಿಕ ಜೀವನದ ವೈಭೋಗಗಳೆಲ್ಲವನ್ನು ಬದಿಗಿಟ್ಟು ಸಾವಿರಾರು ಬಡಜನರ ಉದ್ದಾರಕ್ಕೆ ಅವರ ಆರೈಕೆಗೆ ದುಡಿಯುತ್ತಿರುವ ಈ ಆದರ್ಶ ದಂಪತಿಗಳನ್ನು ಇಮ್ಮೆ ನಮ್ಮ ವಿದ್ಯಾವಂತ ಸೋಕಾಲ್ಡ್ ಟೆಕ್ಕಿಗಳು ಅನುಕರಣೆ ಮಾಡಿದರೆ ನಮ್ಮ ದೇಶದ ಪ್ರಗತಿ ಮತ್ತಷ್ಟು ವೇಗವಾಗುತ್ತದೆ.

ಇಬ್ಬರು ಹೆಣ್ಣು ಮಕ್ಕಳ ಪೋಷಕರಾದ ಡಾ||ಜಮೀಲಾ ಖಲೀದ್ ಹಾಗೂ ಶ್ರೀ ಖಲೀದ್ ದಂಪತಿಗಳು ತಮ್ಮ ಸಂದರ್ಶನದ ವೇಳೆ ತಮ್ಮ ಈ ಸಾರ್ವಜನಿಕ ಸೇವೆಯಲ್ಲಿ ಸುಮಾರು ೧೨ ವರ್ಷಗಳಿಂದ ಇವರ ಬಳಿ ಕೆಲಸ ಮಾಡುತ್ತಿರುವ ಸಿಸ್ಟರ್ ಶಾಂತಾ ಮತ್ತು ಸಿಸ್ಟರ್ ಎಲಿಝಬೆತ್ ಹಾಗೂ ಎಲ್ಲಾ ಸಹೋದ್ಯೋಗಿಗಳನ್ನು ಅಭಿನಂದಿಸಿ ನೆನೆಯುವುದನ್ನು ಮರೆಯಲಿಲ್ಲ. ಮತ್ತು ನಮ್ಮ ಈ ಸೇವೆಯಲ್ಲಿ ಇವರುಗಳ ಪಾತ್ರವೇ ಅತಿ ಮುಖ್ಯವೆಂದು ಸಹ ಹೇಳುತ್ತಾರೆ “ಡಾ||ಜಮೀಲಾ ಖಲೀದ್”. ಇವರ ಈ ಕುಬ್ರಾ ನರ್ಸಿಂಗ್ ಹೋಂ ಈಗ ಸುಮಾರು ಹದಿನೈದು ಇಪ್ಪತ್ತು ಜನಗಳಿಗೆ ಉದ್ಯೋಗವನ್ನು ಸಹ ನೀಡಿದ ಸಂಸ್ಥೆಯಾಗಿದೆ. ಮತ್ತು ತಮ್ಮ ಆಸ್ಪತ್ರೆಗೆ ರೋಗಿಗಳನ್ನು ನೋಡಲು ಬರುವ ಎಲ್ಲಾ ಸಂದರ್ಶಕ ವೈದ್ಯರನ್ನು ಸಹ ತುಂಬು ಮನಸ್ಸಿನಿಂದ ಅಭಿನಂದಿಸುತ್ತಾರೆ.

ಸದಾ ಐಷಾರಾಮಿಯಾಗಿ ಬದುಕಲು ಇಚ್ಚಿಸುವ ವೈದ್ಯರು ಹಾಗೂ ಇಂಜಿನಿಯರುಗಳು ತುಂಬಿರುವ ಈ ಸಮಾಜದಲ್ಲಿ ಡಾ||ಜಮೀಲಾ ಖಲೀದ್ ಹಾಗೂ ಶ್ರೀ ಖಲೀದ್‌ರಂತಹ ಹೃದಯ ವೈಶಾಲ್ಯತೆಯನ್ನು ತುಂಬಿಕೊಂಡ ಮನಸ್ಸುಗಳು ಇನ್ನೂ ಹೆಚ್ಚಿ ರೀತಿಯಲ್ಲಿ ಸಾರ್ವಜನಿಕ ಸೇವೆಯನ್ನು ಮಾಡಲೀ, ಎಲ್ಲಾ ಸಂಭಂಧ ಪಟ್ಟ ಇಲಾಖೆಗಳು ಮತ್ತು ಮಾದ್ಯಮ ಮಿತ್ರರು ಇವರು ಸೇವೆಯನ್ನು ಗುರುತಿಸಿ ಇವರ ಈ ಸೇಯೆಗೆ ಸಹಕಾರಿಯಾಗಿ ನಿಲ್ಲಲಿ, ಸ್ಥಳೀಯ ಜನಪ್ರತಿನಿದಿಗಳು ಇವರನ್ನು ಗುರುತಿಸಿ ಗೌರವಿಸಲಿ, ಇವರ ಕುಟುಂಬಕ್ಕೆ ಭಗವಂತ ಆರೋಗ್ಯ, ಆಯುಷ್ಯ ನೀಡಿ ಹರಸಲೀ!…..

img_5396fgtyujikolp