ಸರಳತೆ –...

ಸರಳತೆ – ಆತ್ಮೀಯ ಸೋದರ ಡಾ||ಎಂ.ಎಂ ಕಲ್ಬುರ್ಗಿ | bangalore news

44
0
SHARE

೧೯೯೮ರ ನವೆಂಬರ್ ೨೮ ಡಾ||ಕಲ್ಬುರ್ಗಿಯವರಿಗೆ ೬೦ವರ್ಷಗಳು ತುಂಬಿದ ದಿನ. ನವೆಂಬರ್ ೨೯ರಂದು ಭಾನುವಾರ ಧಾರವಾಡದ ಮಲ್ಲಿಕಾರ್ಜುನ ಮನ್ಸೂರ ರಂಗ ಮಂದಿರದಲ್ಲಿ ಆ ಸಂತೋಷದ ಸಮಾರಂಭ. ಅಂದು “ಮಹಾಮಾರ್ಗ”ಎಂಬ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮವಿತ್ತು. ಆಹ್ವಾನ ಪತ್ರಕೆ ಬಂದಿತ್ತು.

೨೮ರ ಸಂಜೆ ನಮ್ಮ ಚಿಕ್ಕ ಮಗ “ಅಮ್ಮಾ ಧಾರವಾಡಕ್ಕೆ ಹೋಗುವುದಿಲ್ಲವಾ? ಇನ್ನು ಹೊರಟಂತಿಲ್ಲ” ಎಂದನು. “ಇಲ್ಲಪ್ಪಾ ಹೋಗುವುದಿಲ್ಲ” ಎಂದೆ. “ಯಾಕೆ ಹೋಗುವುದಿಲ್ಲ? ಅವರಿಗೆ ನಿಮ್ಮ ಮೇಲೆ, ನಮ್ಮ ಮನೆಯವರೆಲ್ಲರ ಮೇಲೆ ಎಷ್ಟೋಂದು ಅಭಿಮಾನ! ನೀವು ಹೋಗದಿದ್ದರೆ ಚೆಂದವಾ, ರಾತ್ರಿ ಟ್ರೈನಿನಲ್ಲಿ ಹೋಗುವಿರಂತೆ. ನೀವು ಒಬ್ಬರೇ ಎಲ್ಲೂ ಪ್ರಯಾಣ ಮಾಡುವುದಿಲ್ಲ, ಅದು ನನಗೂ ಗೊತ್ತು. ನಮ್ಮ ಆಫೀಸಿನ ಎಂಜಿನಯರ್ ಆನಂದನನ್ನು ಜೊತೆಗೆ ಕಳುಹಿಸುತ್ತೇನೆ. ತಯಾರಾಗಿ, ನಾನು ಹೋಗಿ ಅವರಿಗೆ ಒಂದು ಸಿಲ್ಕ್ ಶರಟು ಪ್ರೆಸೆಂಟ್ ಕೊಡಲು ತರುತ್ತೇನೆ. ಎಂದು ಮರುಮಾತಿಗೆ ಅವಕಾಶಕೊಡದೇ ಹೊರಗೆ ಹೋದನು.

ಅಲ್ಲೇ ಕುಳಿತಿದ್ದ ನನ್ನ ಪತಿ ಡಾ. ವೈ ರಾಜಶೇಖರ್ ಅವರು ” ನೀನು ಪ್ರಸೆಂಟ್ ಕೊಡಬೇಕಾದ್ದು ಈ ಶರಟು ಗಿರಟು ಅಲ್ಲ. ಅದು ಅತಿಸಾಮಾನ್ಯ ಆಯ್ತು. ಅವರ ವ್ಯಕ್ತಿತ್ವ ಕುರಿತು ಒಂದು ಕವನ ರಚಿಸಿ ಆ ಸಭೆಯಲ್ಲಿ ಹಾಡಿದರೆ ಅದು ನಿಜವಾದ ಪ್ರೆಸೆಂಟ್” ಎಂದರು.

ನಾನು ” ಇದೇಗ ಓಳ್ಳೆ ಸಲಹೆ ಕೊಟ್ಟಿರಿ. ನಾನು ಈಗ ಮನೆಯ ವ್ಯವಸ್ಥೆ ಮಾಡಿ, ರಾತ್ರಿ ರೈಲಿನಲ್ಲಿ ಹೋಗುವುದು ಕೂಡ ಗಡಿಬಿಡಿಯಾಗುತ್ತದೆ. ಅಂಥದರಲ್ಲಿ ಕವನ ಬರೆಯುವುದ್ಯಾವಾಗ? ಅದಕ್ಕೆ ರಾಗ ಗೀಗ ನೋಡಿಕೊಳ್ಳುವುದ್ಯಾವಾಗ? ಎಲ್ಲಾ ಆಗುವ ಕೆಲಸವಾ? ಏನೋ ಸುಲಭವಾಗಿ ಹೇಳಿಬಿಡುತ್ತೀರಿ” ಎಂದೆ. “ನೀನು ಆಕಾಶವಾಣಿಗೆ ನಾಟಕಗಳನ್ನು ಅವರು ಕೊಡುವ ಒಂದು ಶೀರ್ಷಿಕೆ ಇಟ್ಟುಕೊಂಡು ಬರೆಯುವವಳು, ಇದ್ಯಾಕೆ ಆಗುವುದಿಲ್ಲ! ” ಮಹಾಮಾರ್ಗ” ಎಂಬ ಒಂದು ಪದವನ್ನು ಇಟ್ಟುಕೊಂಡು ಬರಿ, ರೈಲಿನಲ್ಲಿ ಮನೆಗೆಲಸ ಏನೂ ಇರೋದಿಲ್ಲ! ಪ್ರಯಾಣದಲ್ಲಿ ನಿದ್ರೆ ಮಾಡುವುದು ಅಷ್ಟಕ್ಕಷ್ಟೆ, ಇನ್ನೂ ರಾಗ ಸಂಯೋಜನೆ ಮಾಡಿ, ರಿಹರ್ಸಲ್ ಬೇಕಾ ನಿನಗೆ? ಕವನ ಕೈಗೆ ಬಂದ ತಕ್ಷಣ ರಾಗಗಳು ತಾನಾಗಿಯೇ ದಾರಿ ತೋರಿಸುತ್ತವೆ. ದೈರ್ಯವಾಗಿ ನಿನ್ನ ಸೋದರನಿಗೆ ಹುಟ್ಟುಹಬ್ಬದ ಶುಭಾಶಯದ ಮಮತೆಯ ಉಡುಗೊರೆ ಕೊಡು” ಎಂದು ಹುರಿದುಂಬಿಸಿದರು.

ಆಶ್ಚರ್ಯವಾಗುವಂತೆ ಡಾ.ಕಲ್ಬುರ್ಗಿಯವರ ಘನವ್ಯಕ್ತಿತ್ವಕ್ಕೆ ತಕ್ಕಂತೆ ನನ್ನ ಮನಸ್ಸಿಗೆ ತೃಪ್ತಿಯಾಗುವಂತೆ ಕವನ ರೈಲಿನ ಗಡಗಡ ಸದ್ದಿನ ಮಧ್ಯೆಯೂ ಮೂಡಿಬಂತು!

ಮರುದಿನ ಬೆಳಿಗ್ಗೆ ೧೦ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯ್ತು. ಶ್ರೀಮತಿ ಶಾಂತಾದೇವಿ ಮಾಳವಾಡರು ಅಧ್ಯಕ್ಷತೆ ವಹಿಸಿದ್ದರೆಂದು ನೆನಪು. ಡಾ.ಹಾಮಾ ನಾಯಕರು, ಡಾ.ಚಿದಾನಂದ ಮೂರ್ತಿಯವರು ಮುಂತಾಗಿ ವಿದ್ವದ್ವಲಯದ ಅನೇಕ ಗಣ್ಯಾತಿಗಣ್ಯರು ನೆರೆದಿದ್ದ ವಿದ್ವತ್ ಸಭೆ ಅದು! ಏಳು (ಸ್ಟಾನ್ಸಾ) ಪದ್ಯಗಳ ಆ ಕವನವನ್ನು ಏಳುರಾಗಗಳಲ್ಲಿ ಯಾವುದೇ ಅಳುಕು, ಅಂಜಿಕೆಯಿಲ್ಲದೇ ಹಾಡಿದೆ! ಅಂದು ಕಂಠವು ಸಹಕರಿಸಿ ನಿಜವಾಗಿಯೂ ಚೆನ್ನಾಗಿ ಬಂತು. ಅನಂತರ ಹಾಮಾ ನಾಯಕರು, ” ನಾವೆಲ್ಲಾ ಇಷ್ಟೋಂದು ಜನ ಮಾತನಾಡಿದ ಸಾರಾಂಶವನ್ನೆಲ್ಲಾ ಒಂದು ಕವನದಲ್ಲಿ ಹಾಕಿ ಹಾಡಿದಿರಲ್ಲ” ಎಂದು ಮೆಚ್ಚುಗೆ ಸೂಚಿಸಿದರು. ಕಲ್ಬುರ್ಗಿರವರ ನಿರಹಂಕಾರಕ್ಕೆ ಇಲ್ಲೇ ಒಂದು ಮಾತು ಹೇಳುವುದು ಸೂಕ್ತ. ಅಂದಿನ ಕಾರ್ಯಕ್ರಮಕ್ಕೆ ನಾನು ಬೆಳಿಗ್ಗೆಯೇ ಕೊಟ್ಟು ಕಳುಹಿಸಿದ್ದ ಸಿಲ್ಕ್ ಶರಟನ್ನೇ ತೊಟ್ಟುಕೊಂಡು ಬಂದರು ಡಾ.ಕಲ್ಬುರ್ಗಿಯವರು! ಅನಂತರ ಕೆಲವು ವರ್ಷಗಳ ಮೇಲೆ ಅವರಿಗೆ ” ನೃಪತುಂಗ ಪ್ರಶಸ್ತಿ” ಬಂದಾಗ ಅವರು ಇಲ್ಲಿರುವ ಅವರ ಏಕೈಕ ಪುತ್ರ ಶ್ರೀವಿಜಯನ ಮನೆಯಲ್ಲಿ ಇಳಿದುಕೊಳ್ಳುವರೆಂದು ತಿಳಿದುಕೊಂಡು ಅಲ್ಲಿಗೆ ಮತ್ತೊಂದು ಸಿಲ್ಕ್ ಶರಟನ್ನು ನನ್ನ ಮಗನ ಕೈಲಿ ಕಳಿಸಿ ಅದನ್ನೇ ಕಾರ್ಯಕ್ರಮಕ್ಕೆ ಹಾಕಿಕೊಂಡು ಬರಬೇಕೆಂದು ಹೇಳಿ ಕಳಿಸಿದ್ದೆ. ” ಮೇಲಿನವರ ಆರ್ಡರ್ ಆಗಿಬಿಟ್ಟಿದೆ” ಎಂದು ನಕ್ಕರಂತೆ. ಅದನ್ನೇ ತೊಟ್ಟು ಕಾರ್ಯಕ್ರಮಕ್ಕೆ ಬಂದರು.

ಅವರಿಗೆ ಬಟ್ಟೆ ಕೊಂಡುಕೊಳ್ಳಲಾಗುವುದಿಲ್ಲವೇ! ನನ್ನ ಮೇಲಿನ ಅದಕ್ಕಿಂತ ಹೆಚ್ಚಾಗಿ ಡಾ.ರಾಜಶೇಖರ್ ಅವರ ಮೇಲಿನ ಪ್ರೀತಿ, ವಿಶ್ವಾಸಕ್ಕೆ ಎಷ್ಟು ಬೆಲೆ ಕೊಟ್ಟರೆಂದು ನೆನಪಿಸಿಕೊಂಡಾಗೊಮ್ಮೆ ಮನ ಆರ್ದ್ರವಾಗುತ್ತದೆ. ಈ ಸರಳತೆಯಲ್ಲಿ ಅವರ ಪ್ರಯ ಪತ್ನಿ ಶ್ರೀಮತಿ ಉಮಾ-ಅವರಿಗೆ ತಕ್ಕ ಸಹಧರ್ಮಿಣಿ.

ಚೆನ್ನೈನಲ್ಲಿದ್ದಾಗ ಈ ದುಃಖವಾರ್ತೆ: ಅಸಹನೀಯವಾದ ಅವರ ಮರಣ ವಾರ್ತೆ ತಿಳಿದು ತಾಕಿಕಾರ್ಥದಲ್ಲಿ ಶೂನ್ಯಳಾದೆ. ಇದು ಕೇವಲ ನನಗಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಶೂನ್ಯಕವಿದಂತಾಯ್ತು ಎಂದರೆ ಖಂಡಿತ ಉತ್ಪ್ರೇಕ್ಷೆಯಲ್ಲ. ಕನ್ನಡ ಸಾಹಿತ್ಯದ ಸಂಶೋದನೆ, ಭಾಷಾಶಾಸ್ರ್ತ, ಶಾಸನ ಪ್ರಪಂಚ, ಜಾನಪದ ಮುಂತಾದ ಅನೇಕ ಪ್ರಕಾರಗಳಲ್ಲಿ ಇನ್ನೂ ಇಂತಹ ವಿದ್ವಾಂಸರಿಲ್ಲ ಎನ್ನುವಂತಹ ರತ್ನದಂತಹ ವ್ಯಕ್ತಿ ಯುಗಕ್ಕೊಮ್ಮೆ ಹುಟ್ಟಿಬರಬಹುದು. ಇಂತಹ ಜ್ಞಾನದ ಮೇರುವನ್ನು ಇನ್ನಷ್ಟು ಕಾಲ ಉಳಿಸಿಕೊಳ್ಳುವ ಭಾಗ್ಯ ಕನ್ನಡಿಗರಿಗಿಲ್ಲದೆ ಹೋಯ್ತು.
kalburgi

ಡಾ.ಜಿ.ವಿ ಜಯಾ ರಾಜಶೇಖರನ್
#೩೩, ೧೫ನೇ ಕ್ರಾಸ್, ೩ನೇಬ್ಲಾಕ್
ಜಯನಗರ, ಬೆಂಗಳೂರು-೫೬೦೦೧೧
ದೂ: ೦೮೦-೨೬೫೪೮೪೨೪

Structured Data, Review
Title: ಸರಳತೆ – ಆತ್ಮೀಯ ಸೋದರ ಡಾ||ಎಂ.ಎಂ ಕಲ್ಬುರ್ಗಿ
Reviewed by jk
Rating: 5.0
Summary:
Description: