ಮೋಸಗಾರರ ಅಡ್ಡಾ...

ಮೋಸಗಾರರ ಅಡ್ಡಾಗಳಾಗಿ ಮಾರ್ಪಡಾಗಿರುವ ಕಾಫೀ ಡೇ, ಹೋಟೆಲ್ಸ್ ಮತ್ತು ರೆಸ್ಟೋರೆಂಟುಗಳು.ಕರ್ನಾಟಕದ ಡಿಜಿ/ಐಜಿಪಿ ರವರು ಹಾಗೂ ಬೆಂಗಳೂರು ಮಹಾನಗರದ ಪೊಲೀಸ್ ಆಯುಕ್ತರ ಗಮನಕ್ಕೆ ವಿಶೇಷ ವರದಿ.

118
1
SHARE

no_mas_fraude_logo
ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ!.
ವ್ಯವಹಾರ ವಹಿವಾಟುಗಳಲ್ಲಿ ಮುಂಬೈ ನಗರವನ್ನೇ ಹಿಂದಿಕ್ಕಿ ಓಡುತ್ತಿದೆ ನಮ್ಮ ಬೆಂಗಳೂರು. ಮುಖ್ಯವಾಗಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಅತ್ಯಂತ ಮುಂಚೂಣಿಯಲ್ಲಿ ನಡೆಯುತ್ತಿದೆ. ಭೂಮಿಯ ಬೆಲೆ ಗಗನಕ್ಕೇರಿದೆ. ಸಾವಿರಾರು ಕೋಟಿ ರೂಪಾಯಿಗಳ ವಹಿವಾಟುಗಳು ಪ್ರತಿನಿತ್ಯ ಈ ಒಂದೇ ಕ್ಷೇತ್ರದಲ್ಲಿ ನಡೆಯುತ್ತದೆ. ನೂರಾರು ಪ್ರತಿಷ್ಠಿತ ಕಂಪನಿಗಳು ಈ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡು ತನ್ನ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುತ್ತಿವೆ. ಆದರೇ, ಪ್ರತಿ ವಿಷಯದಲ್ಲೂ ಸರಿ-ತಪ್ಪುಗಳೆರಡೂ ಇರುವ ಹಾಗೇ ಈ ಕ್ಷೇತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಜನರಿಂದ ಹಣ ಸುಲಿಯುವ ಹಲವಾರು ತಂಡಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಆಘಾತಕಾರಿ ಸಂಗತಿ. ಬೆಂಗಳೂರಿನಲ್ಲಿ ಒಂದು ಸ್ವಂತ ಗೂಡು ಕಟ್ಟಿಕೊಳ್ಳುವ ಸಾಮಾನ್ಯ ಜನರ ಆಸೆ, ಬಯಕೆಗಳನ್ನು ಟಾರ್ಗೆಟ್ ಮಾಡುತ್ತಿರುವ ಇಂತಹ ಖದೀಮರು, ಇವರಿಂದ ಸೈಟುಗಳು, ಮನೆಗಳು, ಜಮೀನುಗಳು ಮತ್ತು ಇದಕ್ಕೆ ಸಂಬಂಧಿಸಿದ ಯಾವುದೇ ತರಹದ ವ್ಯಾಜ್ಯಗಳನ್ನು ಪರಿಹರಿಸಿಕೊಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಕಟುಸತ್ಯ.

“ನಾನು ಹಲವು ತಿಂಗಳುಗಳು ತನಿಖಾತ್ಮಕವಾಗಿ ಗಮನಿಸಿರುವ ಹಾಗೇ” ಕೆಲವರು ತಮ್ಮ ಮೋಬೈಲ್‌ಗಳಲ್ಲಿ ದೊಡ್ಡ ದೊಡ್ಡ ರಾಜಕೀಯ ನಾಯಕರುಗಳ ಫೋಟೋಗಳನ್ನು ವಾಲ್‌ಪೇಪರ್‌ಗಳನ್ನಾಗಿ ಹಾಕಿಕೊಂಡು, ರಾಜಕಾರಣಿಗಳ ಮತ್ತು ಸಿನಿಮಾ ನಟರ ಹುಟ್ಟುಹಬ್ಬಕ್ಕೆ ಅಥವಾ ಯಾವುದೋ ಸಂದರ್ಭಗಳಲ್ಲಿ ಅವರ ಜೊತೆ ಫೋಟೋ ತೆಗೆಸಿಕೊಂಡು ಅವೆಲ್ಲವನ್ನು ತಮ್ಮ ಮೊಬೈಲ್‌ನಲ್ಲಿ ತುಂಬಿಸಿಕೊಳ್ಳುತ್ತಾರೆ. ಇದೇ ಅವರ ಅವ್ಯವಹಾರದ ಮೂಲ ಬಂಡವಾಳ. ಎದೆ ಬಗೆದರೂ ಒಂದು ಅಕ್ಷರ ಇಲ್ಲದ ಮತ್ತು ಸಮಾಜದ ಬಗೆಗೆ ಕಿಂಚಿತ್ತು ಕಾಳಜಿಯೂ ಸಹ ಇರದ ಇಂತಹವರು ಓಡಾಡುವುದು ಮಾತ್ರ ದೊಡ್ಡ ಕಾರುಗಳಲ್ಲೇ. ಅವುಗಳಲ್ಲಿ ಕೆಲವು ಅಡಮಾನವಿರಿಸಿಕೊಂಡವು, ಸೀಸ್ ಮಾಡಿಕೊಂಡು ಬಂದಂತಹವು, ಇನ್ನೂ ಕೆಲವು ಲೋನ್ ಮೇಲೆ ತೆಗೆದುಕೊಂಡು ನಂಬರ್ ಪ್ಲೇಟ್ ಬದಲಿಸಿಕೊಂಡಂತವು, ಮತ್ತೇ ಕೆಲವು ಸೆಕೆಂಡ್ ಹ್ಯಾಂಡ್ ಗಾಡಿಗಳು.

ಮಧ್ಯಾಹ್ನ ಹನ್ನೊಂದು ಘಂಟೆಯಾದರೂ ಹಾಸಿಗೆಯಿಂದ ಏಳದ ಇವರು, ಧರಿಸುವುದು ಮಾತ್ರ ಬ್ರಾಂಡೆಡ್ ಬಟ್ಟೆಗಳನ್ನು. ಟಾಕು ಟೀಕಾಗಿ ಧಿರಿಸು ಮಾಡಿಕೊಂಡು ವಿಧಾನಸೌಧಕ್ಕೆ ಹೋಗುವವರ ರೀತಿಯಲ್ಲಿ ಸೀದಾ ಬರುವುದು ಕಾಫೀ ಡೇಗಳು, ಕಪ್ಪಾ, ಬರೀಸ್ತಾ, ಆನಂದ ಭವನ, ಮಯ್ಯಾಸ್, ಶಾಂತಿಸಾಗರ್, ಸುಖಸಾಗರ್ ಮತ್ತು ಇನ್ನಿತರೇ ದೊಡ್ಡ ಹೋಟೆಲ್ಸ್, ರೆಸ್ಟೋರೆಂಟುಗಳಿಗೆ. ಇಂತಹ ಆಸಾಮಿಗಳಲ್ಲಿ ಎರಡು ವಿಧಗಳಿವೆ ಅವುಗಳಲ್ಲಿ ಕೇವಲ ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ಅವ್ಯವಹಾರಗಳನ್ನು ನಡೆಸುವವರು ಹೋಟೆಲ್ಸ್ ಮತ್ತು ರೆಸ್ಟೋರೆಟುಗಳಿಗೆ ಹೋಗಿ ಕೂರುತ್ತಾರೆ. ಇಂತಹವರು ಕಾಫೀಡೇಗಳಿಗೆ ಬರುವುದು ತೀರಾ ವಿರಳ. ಆದರೇ ಇಲ್ಲಿ ಮತ್ತೊಂದು ಬಗೆಯ ತಂಡಗಳು ತಮ್ಮ ಕಾರ್ಯವನ್ನು ನಡೆಸುತ್ತವೆ. ಅವುಗಳಲ್ಲಿ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ತರಹದ ಕೆಲಸಗಳು ಅಂದರೇ, ಸ್ಲಂ ಬೋರ್ಡ್ ಮನೆಗಳನ್ನು ಕೊಡಿಸುತ್ತೇವೆ, ಅಂಬೇಡ್ಕರ್ ಅಭಿವೃಧ್ಧಿ ನಿಗಮದಿಂದ ಕಾರುಗಳನ್ನು ಕೊಡಿಸುತ್ತೇವೆ, ನೀವು ಯಾರಿಗಾದರೂ ಹಣ ಕೊಟ್ಟು ಕಳೆದುಕೊಂಡಿದ್ದರೇ ಅದನ್ನ ರಿಕವರಿ ಮಾಡಿಕೊಡ್ತೇವೆ, ಸರ್ಕಾರಿ ನೌಕರರಿಗೆ ಟ್ರಾನ್ಸ್‌ಫರ‍್ಗಳು ಕೊಡಿಸ್ತೇವೆ, ರಿಯಲ್ ಎಸ್ಟೇಟ್ ವ್ಯಾಜ್ಯಗಳನ್ನು ಬಗೆಹರಿಸ್ತೇವೆ, ಮಂತ್ರಿಗಳಿಂದ ಲೆಟರ್ ಕೊಡಿಸ್ತೇವೆ, ಹೀಗೆ ನೀವು ಏನೇ ಕೇಳಿದರೂ ಅವರಲ್ಲಿ ಅದಕ್ಕೆ ಪರಿಹಾರವಿದೆ ಎಂದು ಹೇಳುತ್ತಾರೆ. ಅದಕ್ಕೆ ಅವರು ತೋರಿಸುವ ಪುರಾವೆ, ತಮ್ಮ ಮೂಲ ಬಂಡವಾಳವಾದ ಮೊಬೈಲ್‌ನಲ್ಲಿ ತುಂಬಿಸಿಟ್ಟುಕೊಂಡಿರುವ ಡಿಕೆಶಿ, ಹೆಚ್‌ಡಿಕೆ, ಬಿಎಸ್‌ವೈ, ಅಂಬಿ, ಜಿಪಿ, ಹಾಗೂ ಇನ್ನಿತರೇ ರಾಜಕೀಯ ವ್ಯಕ್ತಿಗಳ ಫೋಟೋಗಳು. ಅದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಇನ್ನೂ ತಮ್ಮ ಬಳಿ ಇರುವ ಸುದೀಪ್, ದರ್ಶನ್, ಯಶ್ ಹೀಗೇ ಅನೇಕ ರನ್ನಿಂಗ್ ನಾಯಕ ನಟರುಗಳೊಂದಿಗೆ ತೆಗೆಸಿಕೊಂಡ ಫೋಟೋಗಳು.

ಇದನ್ನು ನಂಬುವ ಮುಗ್ದ ಜನರು ತಮಗೆ ಆಗಬೇಕಾದ ಕೆಲಸಗಳನ್ನು ಇವರ ಬಳಿ ಹೇಳಿಕೊಳ್ಳುತ್ತಾರೆ. ಹೀಗೆ ಜನರು ತಮಗೆ ಆಗಬೇಕಾದ ಯಾವುದೇ ತರಹದ ಕೆಲಸಗಳನ್ನು ಹೇಳಿದರೂ ಸರಿ! ನನ್ನಿಂದ ಆಗುವುದಿಲ್ಲ ಎಂಬ ಮಾತು ಮಾತ್ರ ಈ ಖದೀಮರ ಬಾಯಲ್ಲಿ ಬರುವುದಿಲ್ಲ. ನೀವು ಏನೇ ಕೆಲಸ ಹೇಳಿ, “ಸಾಹೇಬ್ರು ಕೈಲಿ ಒಂದು ಫೋನ್ ಬಿಡಿಸಿದ್ರೆ ನಿಮ್ ಕೆಲ್ಸ ಆಯ್ತು ಬಿಡಿ” ಎಂದು ಮುಖ್ಯಮಂತ್ರಿಗಳ ಠೀವಿಯಲ್ಲಿ ನುಡಿಯುತ್ತಾರೆ. ಇದೆಲ್ಲವನ್ನು ನಂಬಿಸುತ್ತಾ ಬಂದ ಜನಗಳ ಬಳಿ ಕನಿಷ್ಟ ಹತ್ತು ಸಾವಿರದಿಂದ ಹಿಡಿದು ಲಕ್ಷಾಂತರ ರೂಪಯಿಗಳನ್ನು ಸಲೀಸಾಗಿ ಸುಲಿಯುತ್ತಾರೆ. ಅಲ್ಲಿಗೆ ಮುಗಿಯುತ್ತೆ ” ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ!” ಸಿನಿಮಾದ ಫಸ್ಟ್ ಹಾಫ್. ನಂತರ, ದಿನಗಳೆದಂತೆ ಹಣಕೊಟ್ಟವರು ಬಂದು ಕೇಳಲು, ಉತ್ತರಗಳು ಇವರ ಬಳಿ ತಯಾರಾಗಿ ಇರುತ್ತವೆ. ” ಸಾಹೇಬ್ರು ಊರಲ್ಲಿಲ್ಲ, ಸಾಹೇಬ್ರು ಡೆಲ್ಲಿಗೆ ಹೋಗಿದ್ದಾರೆ, ಸಾಹೇಬ್ರುಗೂ ಸಿಎಂಗೂ ಗಲಾಟೆ ನಡೀತಾ ಇದೆ, ಸಾಹೇಬ್ರು ಎಲೆಕ್ಷನ್ ಬ್ಯುಸಿಲೀ ಇದ್ದಾರೆ ಅದು ಮುಗೀಲೀ, ಸೋತರೇ, ಸಾಹೇಬ್ರು ಪಕ್ಷ ಸೋಲ್ತು ಸ್ವಲ್ಪ ದಿನ ತಡೀರೀ, ಗೆದ್ರೆ, ಸಾಹೇಬ್ರು ಪುನಃ ಡೆಲ್ಲಿಗೆ ಹೋಗಿದ್ದಾರೆ, ಸರ್ಕಾರ ವಿಸ್ತರಣೆ ಆಗ್ತಾ ಇದೆ ತಡೀರಿ, ಸಾಹೇಬ್ರು ಇನ್ನೊಂದು ತಿಂಗಳು ಕಾಯ್ರಿ ಅಂತ ಹೇಳಿದ್ದಾರೆ, ಹೀಗೆ ದಿನಪತ್ರಿಕೆಗಳು ಮತ್ತು ವಾರ್ತೆಗಳಲ್ಲಿ ಬರುವ ಸುದ್ದಿಗಳನ್ನೇ ಮರು ಬಂಡವಾಳವನ್ನಾಗಿಸಿಕೊಂಡು ವರ್ಷಗಳನ್ನೇ ಉರುಳಿಸಿಬಿಡುತ್ತಾರೆ. ಜನರು ಇವರಿಗೆ ಕೊಟ್ಟಿರುವ ಕಾಸಿಗೆ ಯಾವುದೇ ತರಹದ ದಾಖಲಾತಿಗಳು ಇರುವುದಿಲ್ಲ ಮತ್ತು ಇವರ ಮೇಲೆ ಜಗಳ ಕಾಯುವ ಪರಿಸ್ಥಿತಿಯೂ ಅವರದ್ದಾಗಿರುವುದಿಲ್ಲ, ಒಂದು ವೇಳೆ ಕೆಲಸ ಆಗದೇ ಇದ್ರೆ ನಮ್ಮ ಹಣ ವಾಪಸ್ಸು ಕೊಡಿ ಎಂದು ಗಡುಸಾಗಿ ಕೇಳಿದರೇ ಮುಗಿದೇ ಹೋಯಿತು. “ನೀನು ನನ್ನ ಬಿಟ್ಟು ಹೇಗೆ ಈ ಕೆಲಸ ಮಾಡ್ಕೋತೀಯೋ ನೋಡೋಣ, ನಿನ್ನ ವಿರುದ್ದ ಸಾಹೇಬ್ರಿಗೆ ಹೇಳ್ತೀನಿ, ನಾನು ಹೋ ಅಂದ್ರೆ ನಮ್ಮ ಹುಡುಗರು ನಿನ್ನನ್ನ ಸಾಯಿಸಿಬಿಡ್ತಾರೆ, ನೀನು ಕೊಟ್ಟ ಹಣ ಸಾಹೇಬ್ರಿಗೆ ಕೊಟ್ಟಾಯ್ತು, ಅವರು ಯಾವಾಗ ಮಾಡ್ತಾರೋ ಆವಾಗ ಕೆಲಸ ಮಾಡಿಸ್ಕೋ, ನೀನೇ ಬೇಕಾದರೇ ಸಾಹೇಬ್ರ ಮನೆ ಹತ್ರ ಹೋಗು, ಹೀಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ಅವರನ್ನು ಭಯಭೀತರನ್ನಾಗಿಸಿ ಓಡಿಸಿಬಿಡುತ್ತಾರೆ. ಮೊದಲೇ ಸಾಮಾನ್ಯ ಜನ, ಮಂತ್ರಿಗಳ ಬಳಿ ಹೋಗೋ ಬುದ್ದಿ, ತಾಕತ್ತು ಇದ್ದಿದ್ರೆ ಇವರಂತ ತಲೆಹಿಡುಕರ ಹತ್ರ ಯಾರು ಬರ‍್ತಿದ್ರು ನೀವೇ ಹೇಳಿ?

ಅಲ್ಲಿಗೆ ಜನರು ಕೊಟ್ಟ ಲಕ್ಷ ರೂಪಾಯಿಗಳು ತಿರುಪತಿ ಹುಂಡಿಗೆ ಹಾಕಿದೆವೆಂದುಕೊಂಡು ಬಂದ ದಾರಿಯನ್ನು ಹಿಡಿಯಬೇಕಾಗುತ್ತದೆ. ಮೊದಲೇ ಸಮಸ್ಯೆಯೆಂದು ಈ ಮೋಸಗಾರರ ಬಳಿ ಪರಿಹಾರಕ್ಕೆಂದು ಬರುವ ಇವರ ಸ್ಥಿತಿ ಬಾಣಲಿಯಿಂದ ಬೆಂಕಿಗೆ ಹಾರಿದ ಹಾಗೆ ಆಗುತ್ತದೆ. ಈ ರೀತಿ ತಿಂಗಳಿಗೆ ಒಬ್ಬೊಬ್ಬ ವಂಚಕನೂ ಬರೋಬ್ಬರಿ ಐದು ಲಕ್ಷಕ್ಕೂ ಮೀರಿದ ಸಂಪಾದನೆಯನ್ನು ಕೇವಲ ಕಾಫೀಡೇಗಳಲ್ಲೇ ಕುಳಿತು ನಡೆಸುತ್ತಿರುವುದು ಪೊಲೀಸರು ಗಮನಿಸಬೇಕಾದ ಅಂಶವಾಗಿದೆ. ಈ ರೀತಿ ಬಂದ ಹಣದಿಂದಲೇ ಐಷಾರಾಮಿ ಕಾರು, ಬ್ರಾಂಡೆಡ್ ಬಟ್ಟೆಗಳ ಮತ್ತು ದುಬಾರು ಮೊಬೈಲ್‌ಗಳನ್ನು ಖರೀದಿಸಿಕೊಂಡು ಕುಡಿಯುತ್ತಾ, ಕುಣಿಯುತ್ತಾ, ತಿಂಗಳಿಗೊಂದು ರೌಂಡ್ ಟ್ರಿಪ್ ಮಾಡುತ್ತಾ ಮಜಾ ಮಾಡುತ್ತಿದ್ದಾರೆ.

ಇದು ಕಾಫೀ ಡೇಗಳ ಕರ್ಮಕಾಂಡವಾದರೇ, ಇನ್ನೂ ಆನಂದ ಭವನ, ಮಯ್ಯಾಸ್, ಶಾಂತಿಸಾಗರ್, ಸುಖಸಾಗರ್ ಮತ್ತು ಇನ್ನಿತರೇ ದೊಡ್ಡ ಹೋಟೆಲ್ಸ್, ರೆಸ್ಟೋರೆಂಟುಗಳಲ್ಲಿ ಸೇರುವವರದ್ದು ಇನ್ನೂ ಖತರ‍್ನಾಕ್ ಕೆಲಸ. ಸದಾ ಬಿಳಿ ಅಂಗಿಗಳನ್ನೇ ತೊಡುವುದು, ತಮ್ಮ ಕಾರುಗಳಿಗೆ ವಿಧಾನಸೌಧದ ಅನಧೀಕೃತ ಪಾಸುಗಳನ್ನು ಹಾಕಿಕೊಳ್ಳುವುದು, ಯಾವುದೋ ಸಂಘದ ಅಥವಾ ಪಕ್ಷದ ಮುಖಂಡರೆಂದು ವಿಸಿಟಿಂಗ್ ಕಾರ್ಡ್ ಕೊಡುವುದು ಹೀಗೆ ಇವರದ್ದು ಸಹ ಪ್ರೀಪ್ಲಾನ್ ಸ್ಕೆಚ್. ಸೈಟುಗಳು, ಮನೆಗಳು, ಅಪಾರ್ಟ್‌ಮೆಂಟುಗಳು ಮತ್ತು ಜಮೀನುಗಳನ್ನು ಕೊಡಿಸುವುದು, ಮಾರಾಟಮಾಡಿಸುವುದು ಮತ್ತು ವ್ಯಾಜ್ಯಗಳನ್ನು ಬಗೆಹರಿಸುವುದಾಗಿ ಹೇಳಿ, ಜನರಿಂದ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುವುದು ಮತ್ತು ಡಿಸಿ ಕಛೇರಿ, ತಹಶೀಲ್ದಾರ್ ಮತ್ತು ಬಿಬಿಎಂಪಿಯಲ್ಲಿ ಕೆಲಸ ಇದೆ ಸ್ವಲ್ಪ ಖರ್ಚಾಗುತ್ತೆ ಎಂದು ಹೇಳಿ ಲಕ್ಷಾಂತರ ರೂಪಾಯಿಗಳನ್ನು ಸುಲಿಯುವುದು. ಜನರು ಹಣ ಕೊಟ್ಟಮೇಲೆ ಇಲ್ಲೂ ಮೇಲೆ ಹೇಳಿದಂತೆ ಸೇಮ್ ಪಿಕ್ಚರ್ ಓಡುತ್ತೇ, ಅದು ಬರೋಬ್ಬರಿ ಸಿಲ್ವರ್ ಜ್ಯೂಬಿಲಿ. ಹಣ ಕೊಟ್ಟವರು ಹತ್ತಾರು ಸಲ ಫಾಲೋಅಪ್ ಮಾಡಿದ ಮೇಲೆ ಹಾಳಾಗಿ ಹೋಗಲೀ ಅಂತಾ ಬಿಟ್ಟು ಬಿಡುತ್ತಾರೆ. ಏಕೆಂದರೇ, ಇಲ್ಲಿಯೂ ಕೂಡ ಗಡುಸಾಗಿ ಹಣ ಕೇಳಿದರೇ, ಗಾಡಿ ರಿವರ‍್ಸ್ ಗೇರ್‌ನಲ್ಲಿ ಓಡುತ್ತದೆ. ಇಲ್ಲೂ ಸಹ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರಗಳು ರಸ್ತೆ ಬದಿಯಲ್ಲೇ ನಡೆಯುತ್ತದೆ.

ಆತ್ಮೀಯ ನಾಗರೀಕರೇ, ಈ ಲೇಖನವನ್ನು ಓದಿದ ಮೇಲೇ ನಿಮಗೆ ನಾವು ತಿಳಿಸುವ ಒಂದು ಸಣ್ಣ ಕಿವಿಮಾತೇನೆಂದರೇ, ಸರ್ಕಾರದಲ್ಲಿ ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದ ಹಾಗೇ ಆಯಾ ಇಲಾಖೆಗಳಿವೆ ಮತ್ತು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿದ್ದಾರೆ. ಅದರಲ್ಲೂ ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲದ ಮುಖಾಂತರವೇ ನೀವು ಕುಳಿತಲ್ಲಿಯೇ ಯಾವ ಅಧಿಕಾರಿಯೊಡನೆ ಬೇಕಾದರೂ ನಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಸರ್ಕಾರಕ್ಕೇ ಆಗಲೀ, ರಾಜಕಾರಣಿಗಳಿಗೇ ಆಗಲೀ ಸಂಬಂಧಪಡದ ಇಂತಹ ಮೋಸಗಾರರ ಕೈಗೆ ಸಿಕ್ಕು ನಲುಗುವುದಕ್ಕಿಂತ ನೇರ ಸಂಭಂಧಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ನಿಮ್ಮ ಕೆಲಸಗಳನ್ನು ಅಧೀಕೃತವಾದ ಸಂಸ್ಥೆಗಳಿಂದಲೇ ಮಾಡಿಸಿಕೊಳ್ಳಿ. ಯಾವುದೇ ಕೆಲಸಗಳಲ್ಲಾದರೂ ಅವಸರ ಬೇಡ, ತಾಳ್ಮೆಯಿಂದ ವರ್ತಿಸಿ ನಿಮ್ಮ ಹಣ ಮತ್ತು ಆಸ್ತಿಗಳನ್ನು ಕಾಪಾಡಿಕೊಳ್ಳಿ. ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ಬಂದು ನಿಮಗೆ ಈ ರೀತಿಯಾದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿ ನೀವು ಮೋಸಹೋಗಿದ್ದರೇ ಕೂಡಲೇ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಮೋಸಗಾರರ ವಿರುದ್ದ ದೂರು ದಾಖಲಿಸಿ, ಸಮಾಜವನ್ನು ಉತ್ತಮ ರೀತಿಯಲ್ಲಿ ಕಟ್ಟಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಮತ್ತು ನಯವಂಚಕರನ್ನು ಬುಡಸಮೇತ ಕಿತ್ತೊಗೆಯೋಣ!

ಮಾನ್ಯ ಪೊಲೀಸ್ ಆಯುಕ್ತರೇ,
ಕೆಲವು ವರ್ಷಗಳಿಂದ ಇಂತಹ ಹಲವಾರು ರೀತಿಯ ಪ್ರಕರಣಗಳನ್ನು ಗಮನಿಸಿ, ಪರಿಶೀಲಿಸಿ, ದಾಖಲಾತಿಗಳನ್ನು ಸಂಗ್ರಹಿಸಿ ಮತ್ತು ಮೋಸಗಾರರ ಬೆನ್ನತ್ತಿ ಈ ಲೇಖನದ ಮುಖಾಂತರ ಈ ಜಾಲವನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ದಯಮಾಡಿ ಕೂಡಲೇ ಒಂದು ಪತ್ರಿಕಾಗೋಷ್ಟಿಯನ್ನು ಕರೆದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮತ್ತು ಮೋಸ ಹೋದವರನ್ನು ತಮ್ಮ ಕಛೇರಿಗೆ ಕರೆಯಿಸಿ ದೂರು ಪಡೆದು ಈ ಬೃಹತ್ ವಂಚಕ ಜಾಗಗಳನ್ನು ಭೇಧಿಸಿ, ಬೆಂಗಳೂರಿಗರಿಗೆ ಶಾಂತಿ, ನೆಮ್ಮದಿಗಳನ್ನು ದಯಪಾಲಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

– ಜರಗನಹಳ್ಳಿ ಕಾಂತರಾಜು
ಸಂಪಾದಕ

fake-islamic-rights-facebook-page-inciting-hatred-2
ಬೀ ಅಲರ‍್ಟ್ ಅಂಡ್ ಬೀ ಸೇಫ್
ಭಾರತೀಯ ಸಂಸ್ಕೃತಿಯಲ್ಲಿ “ನಂಬಿಕೆ”ಗೆ ಅಗ್ರ ಸ್ಥಾನವಿದೆ. ನಂಬಿಕೆಯೇ ಜೀವನ, ಕಷ್ಟದಲ್ಲಿರುವವರಿಗೆ ಯಾರು ಬೇಕಾದರೂ ಸಹಾಯ ಮಾಡಬಹುದು ಅದು ಪ್ರತಿಯೊಬ್ಬರ ಹಕ್ಕು. ಈ ಅಂಶಗಳನ್ನು ತಮ್ಮ ಮೂಲ ಬಂಡವಾಳವನ್ನಾಗಿಸಿಕೊಂಡು ಸಮಾಜಕ್ಕೆ ಮಾರಕವಾಗಿರುವ “ವೈಟ್ ಕಾಲರ್ ಕ್ರಿಮಿನಲ್ಸ್‌ಗಳ” ಮೇಲೆ ಈಗಾಗಲೇ ಗಮನಹರಿಸಲಾಗಿದೆ.

ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಹಲವು ಬಗೆಯ ಕಳ್ಳತನ ಹಾಗೂ ವಂಚನೆ ಪ್ರಕರಣಗಳು ನಡೆಯುತ್ತಿದ್ದು, ಇವುಗಳಲ್ಲಿ ಭಾಗಿಗಳಾದವರನ್ನು ನಾವು ಬಂದಿಸುತ್ತಿದ್ದೇವೆ. ಸಮಾಜವನ್ನು ಕಾಡುವ ಇಂತಹ ಕಳ್ಳರುಗಳನ್ನು ಕ್ರಿಮಿನಲ್‌ಗಳೆಂದು ಕರೆದರೆ, ಇನ್ನೂ, ಕಾನೂನು ಮತ್ತು ಸಮಾಜದ ವ್ಯವಸ್ಥೆಯ ಪೂರ್ಣ ಪರಿಚಯವಿರುವ ಹಲವಾರು “ವೈಟ್ ಕಾಲರ್ ಕ್ರಿಮಿನಲ್”ಗಳು ಸಹ ತಮ್ಮ ಕೈಚಳಕವನ್ನು ತೋರಿಸುತ್ತಾ, ಜನಗಳಿಂದ ಹಣವನ್ನು ದೋಚುತ್ತಿದ್ದಾರೆ. ಇಂತಹವರನ್ನು ಪತ್ತೆಹಚ್ಚಿ ಅವರನ್ನು ಕಾನೂನು ಚೌಕಟ್ಟಿನಲ್ಲಿ ಶಿಕ್ಷಿಸಿ, ಮೋಸಗೊಳಗಾದವರಿಗೆ ನ್ಯಾಯ ಕೊಡಿಸುವ ಪ್ರಯತ್ನವನ್ನು ಈಗಾಗಲೇ ಮಾಡುತ್ತಿದ್ದೇವೆ. ಇಂತಹ ಸೂಕ್ಷ್ಮ ವಿಚಾರದಲ್ಲಿ “ಏಕಲವ್ಯ” ಪತ್ರಿಕೆಯ ಈ ಅಭಿಯಾನವು ಬಹಳ ಪ್ರಯೋಜನಕಾರಿಯೂ ಹಾಗೂ ಸಾರ್ವಜನಿಕರಿಗೆ ಉಪಯುಕ್ತಕಾರಿಯೂ ಆಗಿದೆ. ಈ ವಿಷಯವಾಗಿ ನಾನು ಪತ್ರಿಕೆಯನ್ನು ಹಾಗೂ ಸಂಪಾದಕರನ್ನು ಅಭಿನಂದಿಸುತ್ತೇನೆ.

ಈ ಮೇಲ್ಕಂಡ ರೀತಿಯ ಕ್ರಿಮಿನಲ್‌ಗಳಿಂದ ಮೋಸ ಹೋಗಿ ಅವರಿಂದ ಕಳೆದುಕೊಂಡ ಹಣವನ್ನು ವಾಪಸ್ಸು ಪಡೆಯಲಾಗದೆ ಸೋತಿರುವವರು ಕೂಡಲೇ ತಮಗೆ ಮೋಸ ಮಾಡಿದ ವ್ಯಕ್ತಿಗಳ ಸಂಪೂರ್ಣ ಮಾಹಿತಿಗಳೊಂದಿಗೆ ನಮ್ಮ ಕಛೇರಿಯನ್ನು ಸಂಪರ್ಕಿಸಬೇಕಾಗಿ ತಿಳಿಸುತ್ತೇನೆ. ಸಾರ್ವಜನಿಕರು ಇನ್ನು ಮುಂದೆಯಾದರೂ ರಸ್ತೆಗಳಲ್ಲಿ, ಹೋಟೆಲ್‌ಗಳಲ್ಲಿ, ಕಾಫಿಡೇಗಳಲ್ಲಿ ಮೀಟಿಂಗ್ ಮಾಡುವುದನ್ನು ಬಿಟ್ಟು, ಸಂಭಂಧಪಟ್ಟ ಇಲಾಖೆ, ಕಛೇರಿಗಳು ಮತ್ತು ಅಧಿಕಾರಿಗಳನ್ನು ಬೇಟಿಮಾಡಿ ಅವರಿಂದ ತಮ್ಮ ಕಾರ್ಯಗಳನ್ನು ಮಾಡಿಸುವುದು ಓಳಿತು. ಅಥವಾ ತಮಗೆ ಸಹಾಯ ಮಾಡಲು ಬರುವವರ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ನಂತರ ಮುಂದುವರೆಯಬೇಕು. ನಮಗೆ ಮಂತ್ರಿ ಗೊತ್ತು, ಸ್ಟಾರ್‌ಗಳು ಗೊತ್ತು, ಡಾನ್‌ಗಳು ಗೊತ್ತು ಎಂದು ಹೇಳುವವರ ಮೇಲೆ ಸಾರ್ವಜನಿಕರು ನಿಗಾ ಇರಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು. ತಮ್ಮ ಕೆಲಸ ಮುಗಿಯುವವರೆಗೂ ಯಾರಿಗೂ ಹಣವನ್ನು ನೀಡಬಾರದು, ಒಂದು ವೇಳೆ ಅವರು ನಿಮ್ಮ ಕೆಲಸವನ್ನು ಮಾಡಿಕೊಡುವವರೇ ಆಗಿದ್ದರೇ ನಿಮ್ಮ ಬಳಿ ಹಣಪಡೆಯುವುದಿಲ್ಲ. ಕೆಲಸ ಮುಗಿದ ಬಳಿಕ ಆ ಕೆಲಸಕ್ಕೆ ತಕ್ಕ ಹಣವನ್ನು ಮಾತ್ರ ಪಡೆಯುತ್ತಾರೆ. ನಿಮ್ಮ ಕೆಲಸ ಮಾಡಿಕೊಡಲು ಮುಂಚಿತವಾಗಿಯೇ ಹಣ ಕೇಳುವವರಲ್ಲಿ ಜಾಗೃತಿವಹಿಸಬೇಕು. ಅನುಮಾನ ಬಂದ ತಕ್ಷಣ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿ.

ಮೊಬೈಲ್ ಫೋನುಗಳಲ್ಲಿ ರಾಜಕಾರಣಿಗಳ, ಸಿನಿಮಾ ನಟರ ಹಾಗೂ ಸಮಾಜದ ಗಣ್ಯ ವ್ಯಕ್ತಿಗಳ ಜೊತೆ ತೆಗೆಸಿಕೊಂಡ ಫೋಟೋಗಳನ್ನು ತೋರಿಸಿ ನಿಮ್ಮನ್ನು ಮೋಸಗೊಳಿಸಿ, ಹಣ ಲಪಟಾಯಿಸುವವರ ಬಗ್ಗೆ ಎಚ್ಚರದಿಂದಿರಿ. ನೆಮ್ಮದಿಯ ಹಾಗೂ ಸ್ವಸ್ಥ ಬೆಂಗಳೂರಿಗಾಗಿ ಪೊಲೀಸರೊಂದಿಗೆ ಸಹಕರಿಸಿ, ಎಚ್ಚರದಿಂದಿರಿ!
ಶ್ರೀ ಪಿ. ಹರಿಶೇಖರನ್ ಐ.ಪಿ.ಎಸ್
ಅಪರ ಪೊಲೀಸ್ ಆಯುಕ್ತರು, ಪೂರ್ವ
ಬೆಂಗಳೂರು ನಗರ

1 COMMENT

Comments are closed.