“ಲೋಕ ಜಂ...

“ಲೋಕ ಜಂಗಮ” ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 109 ವರ್ಷಗಳ ಬದುಕಿನ ಕುರಿತ ಅಪರೂಪದ ಸಾಕ್ಷ್ಯಚಿತ್ರ | loka jangama b2b news

216
0
SHARE

ಕ್ರಿಯಾಶೀಲ ವ್ಯಕ್ತಿಯೊಬ್ಬರು “ಈ ಭೂಮಿ ಮತ್ತು ಅದರ ಮೇಲಿರುವ ನನ್ನ ಬದುಕಿನಲ್ಲಿ ನಾನು ಎಷ್ಟು ಮುಳುಗಿದ್ದೇನೆಂದರೆ, ಸ್ವರ್ಗ ಮತ್ತು ದೇವತೆಗಳ ಬಗೆಗೆ ಯೋಚನೆ ಮಾಡಲೂ ಸಾಧ್ಯವಿಲ್ಲದಷ್ಟು” ಎಂದಿದ್ದಾರೆ. ಈ ಮಾತಿನಂತೆ ಲೋಕದ ಬಡಮಕ್ಕಳಿಗೊಂದು ಭರವಸೆಯ ಭವಿಷ್ಯವನ್ನು ಒದಗಿಸುವ ಮಹಾಮಣಿಹದಲ್ಲಿ ಸಂಪೂರ್ಣ ಲೀನವಾಗಿರುವ ಒಂದು ದಿವ್ಯ ಚೇತನ ಶ್ರೀ ಸಿದ್ದಗಂಗಾಮಠದ ಕ್ಷೇತ್ರಾಧ್ಯಕ್ಷರಾದ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು. ಪರಮಪೂಜ್ಯರಾದ ಡಾ|| ಶ್ರೀ ಶ್ರೀ ಶಿವಕುಮಾರಸ್ವಾಮೀಜಿಯವರು ಜಗತ್ತು ಕಂಡ ಒಂದು ಅಚ್ಚರಿ. ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು ೮೮ವರ್ಷಗಳ ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ದಗಂಗೆಯ ಸಿದ್ದಿಪುರುಷರು ಪೂಜ್ಯ ಸ್ವಾಮೀಜಿಯವರು, ಲೋಕವೇ ವಿಸ್ಮಯಗೊಳ್ಳುವಂತಹ ಸೇವಾ ಕಾರ್ಯಗಳಲ್ಲಿ ಹಗಲಿರುಳೆನ್ನದೇ ತಮ್ಮನ್ನು ತೊಡಗಿಸಿಕೊಂಡಿರುವ ಇಂತಹ ಪುಣ್ಯಪುರುಷರ ಬದುಕಿನ ಹಾದಿಯ ಕುರಿತ ಸಮಗ್ರ ಸಾಕ್ಷ್ಯಚಿತ್ರವೇ “ಲೋಕ ಜಂಗಮ”.


“ಲೋಕ ಜಂಗಮ” ಸಾಕ್ಷ್ಯಚಿತ್ರದಲ್ಲಿ ೧೦೮ ವಸಂತಗಳನ್ನು ಕಂಡು ೧೦೯ರ ಹೊಸ್ತಿಲಲ್ಲಿ ಮುನ್ನಡೆಯುತ್ತಿರುವ, ಪೂಜ್ಯರಾದ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ನಡೆದು ಬಂದ ದಾರಿ, ಶ್ರೀ ಸಿದ್ದಗಂಗೆ ಪುಣ್ಯ ಕ್ಷೇತ್ರದ ಮಹಾತ್ಮೆ ಹಾಗೂ ಇತಿಹಾಸ ಇವುಗಳನ್ನು ಪರಿಣಾಮಕಾರಿಯಾಗಿ ತರುವ ಪ್ರಯತ್ನವಾಗಿ ಮೂಡಿ ಬಂದಿದೆ. ಇವೆಲ್ಲದರ ಜೊತೆಗೆ ಕರ್ನಾಟಕದ ಶೈಕ್ಷಣಿಕ ಹಾಗೂ ಸಾಮಾಜಿಕ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸಿದ ಶರಣ ಧರ್ಮದ ಮಠಗಳು ನಡೆದು ಬಂದ ದಾರಿ, ಅವುಗಳ ಇತಿಹಾಸ, ಸಮಾಜ ನಿರ್ಮಾಣ ಕಾರ್ಯದಲ್ಲಿನ ಶರಣ ಮಠಗಳ ಪಾತ್ರ, ಹನ್ನೆರಡನೇಯ ಶತಮಾನದ ಬಸವ ಕ್ರಾಂತಿಯ ತತ್ವ ಸಿದ್ದಾಂತಗಳು, ದಾಸೋಹ ತತ್ವ, ಆದರ್ಶಗಳೇ ಮೊದಲಾದ ಶರಣ ಸಂಪ್ರದಾಯದ ಕುರಿತ ಹಲವು ಮಹತ್ವದ ವಿಚಾರಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಮನಮುಟ್ಟುವಂತೆ ತರಲಾಗಿದೆ. ಶ್ರೀ ಮಠದ ಹಾಗೂ ಪೂಜ್ಯ ಸ್ವಾಮೀಜಿರವರ ಬಗ್ಗೆ ನಿರ್ಮಾಪಕರಾದ ಶ್ರೀ ಜರಗನಹಳ್ಳಿ ಕಾಂತರಾಜುರವರಿಗೆ ಇರುವ ಭಕ್ತಿ, ಶ್ರದ್ದೆಗಳೇ “ಲೋಕ ಜಂಗಮ” ರೂಪುಗೊಳ್ಳುವುದರ ಹಿಂದಿನ ಪ್ರೇರಕ ಅಂಶ.


ಈ ಸಾಕ್ಷ್ಯಚಿತ್ರ ಪರಿಣಾಮಕಾರಿಯಾಗಿ ರೂಪುಗೊಳ್ಳುವಲ್ಲಿ ನಿರ್ದೇಶಕನಾದ ನನಗಿಂತಲೂ ಹೆಚ್ಚಿ ಶ್ರಮ ನನ್ನ ತಂಡದ್ದು. ಈ ಸಾಕ್ಷ್ಯಚಿತ್ರವು ತನ್ನ ಆಳವಾದ ವಿಷಯ ಸಂಗ್ರಹ, ಆಸಕ್ತಿದಾಯಕವಾಗಿ ನೋಡಿಸಿಕೊಂಡು ಹೋಗುವ ನಿರೂಪಣಾ ಶೈಲಿಗಳಿಂದ ತುಂಬಾ ವಿಭಿನ್ನವಾದ, ವಿನೂತನವಾದ ಸಾಕ್ಷ್ಯಚಿತ್ರವಾಗಿದೆ. ಇದಕ್ಕಾಗಿ ಸುಮಾರು ಒಂದು ವರ್ಷಗಳ ಕಾಲ ತುಮಕೂರು, ಮೈಸೂರು, ಬೆಂಗಳೂರು, ಚಾಮರಾಜನafjamsskಗರ, ಮಾಗಡಿ ತಾಲ್ಲೂಕು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ನೆಲೆಸಿರುವ ಮಠದ ಹಾಗೂ ಪರಮಪೂಜ್ಯರ ಹಲವು ಅಪರೂಪದ ಸುಮಾರು ೬೦ ಜನ ಒಡನಾಡಿಗಳನ್ನು, ಭಕ್ತರನ್ನು, ಹಳೆಯ ವಿಧ್ಯಾರ್ಥಿಗಳನ್ನು, ಹಲವು ಧರ್ಮದ ಮಠಾಧೀಸರನ್ನು, ಶರಣ ಪರಂಪರೆಯ ಕುರಿತು ಆಳವಾಗಿ ಸಂಶೋಧನೆ ಮಾಡಿರುವ ವಿದ್ವಾಂಸರನ್ನು ಮಾತನಾಡಿಸಿ ಸಾಕ್ಷ್ಯಚಿತ್ರಕ್ಕಾಗಿ ಮಾಹಿತಿ ಸಂಗ್ರಹ ಹಾಗೂ ಚಿತ್ರೀಕರಣ ಮಾಡಿಕೊಳ್ಳಲಾಗಿದೆ.


ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದಗಳೋಂದಿಗೆ, ರಾಷ್ಟ್ರಕವಿ ಡಾ||ಜಿ.ಎಸ್ ಶಿವರುದ್ರಪ್ಪ, ಹಿರಿಯ ಸಂಶೋದಕರಾದ ಡಾ|| ಎಂ.ಎಂ ಕಲಬುರ್ಗಿ, ಪ್ರೋ. ಹೆಚ್.ವಿ ವೀರಭದ್ರಯ್ಯ ಮೊದಲಾದ ಹಿರಿಯರು ಹಾಗೂ ಸಂಶೋದಕರ ಮಾರ್ಗದರ್ಶನದಲ್ಲಿ “ಲೋಕ ಜಂಗಮ” ಸಾಕ್ಷ್ಯಚಿತ್ರವನ್ನು ರೂಪಿಸಲಾಗಿದೆ.

ಲೋಕ ಜಂಗಮ ಸಾಕ್ಷ್ಯಚಿತ್ರವನ್ನು ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ತಮ್ಮ ಅಮೃತಹಸ್ತದಿಂದ ಡಿಸೆಂಬರ್ ೨೧, ೨೦೧೪ರಂದು ಶ್ರೀ ಮಠದ ಹಳೆಯ ವಿಧ್ಯಾರ್ಥಿಗಳ ಮಹಾಅಧಿವೇಶನದ ಶುಭ ಸಂಧರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಸುಮಾರು ೨೫೦೦೦ ಡಿವಿಡಿಗಳು ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶಗಳಿಗೂ ತಲುಪಿವೆ. ಜೊತೆಗೆ ನಿರ್ಮಾಪಕರಾದ ಜರಗನಹಳ್ಳಿ ಕಾಂತರಾಜುರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯಾಧ್ಯಂತ ೧೦೮ ಸಾರ್ವಜನಿಕ ಪ್ರದರ್ಶನಗಳಲನ್ನು ಸಹ ಮಾಡಿ “ಲೋಕ ಜಂಗಮ” ರನ್ನು ರಾಜ್ಯದ ಮೂಲೆ ಮೂಲೆಗೂ ಕರೆದೊಯ್ಯುವ ವ್ಯವಸ್ಥೆಯನ್ನು ಮಾಡಲಾಗಿದೆ.


ಸಾಕ್ಷ್ಯಚಿತ್ರದ ಟ್ರೈಲರ್ ಯೂಟ್ಯೂಬ್‌ನಲ್ಲಿ ನೋಡಬಹುದು.

www.youtube.com/lokajangama

www.youtube.com/ jkmovies

jysy
ಸಾಕ್ಷ್ಯಚಿತ್ರ ಮಾಡಲು ಹಣಕಾಸಿನ ಸಂಪನ್ಮೂಲ ಒದಗಿಸಿದ ಶ್ರೀ ಜರಗನಹಳ್ಳಿ ಕಾಂತರಾಜುರವರಿಗೆ, ಸಾಕ್ಷ್ಯಚಿತ್ರಕ್ಕೆ ಮಾರ್ಗದರ್ಶನ ನೀಡಿದ ರಾಷ್ಟ್ರಕವಿ ದಿವಂಗತ ಡಾ||ಜಿ.ಎಸ್ ಶಿವರುದ್ರಪ್ಪ, ಹಿರಿಯ ಸಂಶೋದಕರಾದ ದಿವಂಗತ ಡಾ|| ಎಂ.ಎಂ ಕಲಬುರ್ಗಿ, ಪ್ರೋ. ಹೆಚ್.ವಿ ವೀರಭದ್ರಯ್ಯ ಮೊದಲಾದ ಹಿರಿಯರು ಹಾಗೂ ಸಂಶೋದಕರುಗಳಿಗೆ ಹಾಗೂ ತಮ್ಮ ಘನ ಆಶೀರ್ವಾದದಿಂದ ನಮ್ಮನ್ನು ಹರಸಿದ ಪರಮಪೂಜ್ಯ ಸ್ವಾಮೀಜಿಯವರಿಗೆ ತಂಡದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ.

ಒಟ್ಟಾರೆ ಈ ಸಾಕ್ಷ್ಯಚಿತ್ರವು ಶ್ರೀ ಸಿದ್ದಗಂಗಾ ಕ್ಷೇತ್ರದ, ಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ಹಾಗೂ ಶರಣರ ಪರಂಪರೆಯನ್ನು ಕುರಿತಾಗಿ ಮಹತ್ವದ ಆಕರ ಸಾಕ್ಷ್ಯಚಿತ್ರವಾಗಿದೆ.

“ಲೋಕ ಜಂಗಮ” ಸಾಕ್ಷ್ಯಚಿತ್ರದ ತಂಡ:
ಛಾಯಾಗ್ರಹಣ: ದರ್ಶನ್ ಹೆಬ್ಬಾಳ್, ಕಿಟ್ಟಿ ಕೌಶಿಕ್, ಮಂಜು.ಕೆ ರೆಡ್ಡಿ, ಕುಮಾರ್ ದೊಡ್ಡ ಆಲಹಳ್ಳಿ
ಸಹಾಯಕ ನಿರ್ದೇಶನ: ವಸಂತಕುಮಾರ್
ಮಾಹಿತಿ ಸಂಗ್ರಹ: ಶ್ರೀಮತಿ ಸವಿತ.ಕೆ ಅವರಸಂಗ
ಸಂಕಲನ: ವಿನೋದ್‌ಕುಮಾರ್
ರಚನೆ, ನಿರ್ದೇಶನ: ಕೆ.ಎಸ್ ಪರಮೇಶ್ವರ
ನಿರ್ಮಾಪಕರು: ಜರಗನಹಳ್ಳಿ ಕಾಂತರಾಜು
ನಿರ್ಮಾಣ ಸಂಸ್ಥೆ: ಜೆಕೆ ಮೂವೀಸ್ ಅಂಡ್ ಮ್ಯೂಸಿಕ್

ಧನ್ಯವಾದಗಳೊಂದಿಗೆ,
ಕೆ.ಎಸ್ ಪರಮೇಶ್ವರ
ನಿರ್ದೇಶಕರು, ಯುವನಟರು, ಬರಹಗಾರರು

+91 9008099686

kalamadhyammedia@gmail.com

www.kalamadhyam.com