‘ನಿರ್ಮಾಪಕರ ನು...

‘ನಿರ್ಮಾಪಕರ ನುಡಿ’ “ತೇಜಸ್ವಿಯನ್ನು ಹುಡುಕುತ್ತಾ”

202
0
SHARE

12310434_763770863734648_2382811089663833342_n10646620_1399879923600764_927958826007156795_n’ಮತ್ತೆ ಮತ್ತೆ ತೇಜಸ್ವಿ’ ಎಂಬ ಅಪೂರ್ವವಾದ ಸಾಕ್ಷ್ಯಚಿತ್ರ ನಮ್ಮ ಜೆ.ಕೆ ಮೂವೀಸ್ ಮತ್ತು ಮ್ಯೂಸಿಕ್ಸ್ ಸಂಸ್ಥೆಯ ಚೊಚ್ಚಲ ನಿರ್ಮಾಣದ ಚಿತ್ರ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಈ ಸಾಕ್ಷ್ಯಚಿತ್ರ ಮಾಡುವ ಬಗ್ಗೆ ಶ್ರೀ.ಪರಮೇಶ್ವರರವರು ನನಗೆ ತಿಳಿಸಿದ ಕೂಡಲೇ ಒಪ್ಪಿಕೊಳ್ಳಲು ಕಾರಣ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಹೆಸರು. ನಮ್ಮ ನಂಬಿಕೆ ಹುಸಿಯಾಗದಂತೆ ಈ ಸಾಕ್ಷ್ಯಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸುವಲ್ಲಿ ನಿರ್ದೇಶಕರ ತಂಡ ಶ್ರಮಿಸಿದೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು. ಈಗ ಈ ಸಾಕ್ಷ್ಯಚಿತ್ರದ ಅನುಭವಗಳು ’ತೇಜಸ್ವಿಯನ್ನುಹುಡುಕುತ್ತಾ’ ಪುಸ್ತಕವಾಗಿ ಹೊರಬರುತ್ತಿರುವುದು ಮತ್ತಷ್ಟು ಸಂತಸದ ಸಂಗತಿ. ಬಹಳ ಸರಾಗವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕವನ್ನು ನಾನು ಈಗಾಗಲೇ ಓದಿದ್ದೇನೆ, ಮೆಚ್ಚಿದ್ದೇನೆ. ಅದಕ್ಕಾಗಿ ಪ್ರಕಾಶಕರಿಗೆ ಮತ್ತು ಲೇಖಕರಿಗೆ ಅಭಿನಂದನೆಗಳು. ’ಮತ್ತೆ ಮತ್ತೆ ತೇಜಸ್ವಿ’ಯಂತಹ ಮತ್ತಷ್ಟು ಸದಭಿರುಚಿಯ ಕಲಾಕೃತಿಗಳನ್ನು ನಿರ್ಮಿಸುವುದು ನಮ್ಮ ಜೆ.ಕೆ ಮೂವೀಸ್ ಮತ್ತು ಮ್ಯೂಸಿಕ್ಸ್ ಸಂಸ್ಥೆಯ ಆಶಯ. ಸರ್ವೇಜನ ಸುಖಿನೊಭವಂತು.

 12805739_806980269413707_8153717901113154487_n

ಇಂತಿ,
ಜರಗನಹಳ್ಳಿಕಾಂತರಾಜು

ನಿರ್ಮಾಪಕರು

“ತೇಜಸ್ವಿಯನ್ನು ಹುಡುಕುತ್ತಾ” – ಭಾಗ 1

ಪೂರ್ವತಯಾರಿ

 ಹಾಗೆ ಸರಿರಾತ್ರಿಯಲ್ಲಿ ಬೀಜಾಂಕುರವಾಗಿದ್ದು ತೇಜಸ್ವಿ ಕುರಿತ ಸಾಕ್ಷ್ಯಚಿತ್ರದ ಯೋಚನೆ. ಅದಾಗಿ ಮುಂದಿನ ಒಂದು ತಿಂಗಳ ಕಾಲ ನಾನು ಜಗತ್ತಿನ ಅತ್ತ್ಯುತ್ತಮ ಸಾಕ್ಷ್ಯಚಿತ್ರಗಳನ್ನು ಬೆಂಗಳೂರಿನ ತುಂಬೆಲ್ಲಾ ಹುಡುಕಿ, ಕೆಲವನ್ನು ಸ್ನೇಹಿತರಲ್ಲಿ ಗೋಗರೆದು ಕಾಡಿ ಬೇಡಿ ತಂದು, ಮತ್ತು ಕೆಲವನ್ನು ಅಂತರ್ಜಾಲದಿಂದ ಪಡೆದುಕೊಂಡು ನೋಡಿದೆ ಮತ್ತು

ಆ ಸಾಕ್ಷ್ಯಚಿತ್ರಗಳು ಏಕೆ ಅತ್ಯುತ್ತಮ ಎಂದು ಪರಿಗಣಿಸಲ್ಪಟ್ಟಿವೆ ಎಂದು ವಿವರವಾಗಿ ಅಧ್ಯಯನ ಮಾಡಿದೆ. ಹೇಮಂತ ಮತ್ತು ನಾನು ಇಬ್ಬರೂ ಈ ಕುರಿತಾಗಿ ತುಂಬಾ ಚರ್ಚೆ ಮಾಡುತ್ತಿದ್ದೆವು. ನಾವು ನೋಡಿದ ಸಾಕ್ಷ್ಯಚಿತ್ರದ ವಿಶೇಷಗಳೇನು? ಆಯ್ದುಕೊಂಡಿರುವ ವಿಷಯ ಏನು? ಅದರ ನಿರೂಪಣಾ ಕ್ರಮ ಹೇಗಿದೆ? ಕ್ಯಾಮೆರಾ, ಎಡಿಟಿಂಗ್, ಸೌಂಡ್ ಮುಂತಾದ ತಾಂತ್ರಿಕ ಆಂಶಗಳಲ್ಲಿನ ವಿಶೇಷತೆ ಏನು? ಮುಂತಾದ ಹತ್ತು ಹಲವು ಅಂಶಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದೆವು. ಇದರ ಜೊತೆಗೆ ನಾನು ತೇಜಸ್ವಿ ಸಾಹಿತ್ಯದ ಮರುಓದು ನಡೆಸುತ್ತಿದ್ದೆ. ಇದಕ್ಕೆ ಮೊದಲು ತೇಜಸ್ವಿಯ ಸಾಹಿತ್ಯವನ್ನು ಅಭಿರುಚಿಗಾಗಿ ಓದಿಕೊಂಡಿದ್ದೆ. ಆದರೆ ಈಗ ಸಾಕ್ಷ್ಯಚಿತ್ರ ಮಾಡಬೇಕೆಂದು ಹೊರಟಾಗ ಅವರ ಸಾಹಿತ್ಯವನ್ನು ಇನ್ನೂ ಆಳವಾಗಿ, ವಿವರಗಳಲ್ಲಿ ಓದಿಕೊಳ್ಳಬೇಕಿತ್ತು. ಮುಖ್ಯವೆನಿಸಿದ ವಿಷಯಗಳನ್ನು, ಅಂಶಗಳನ್ನು ನೋಟ್ಸ್ ಮಾಡಿಕೊಳ್ಳಬೇಕೆತ್ತು.

ಇಷ್ಟೆಲ್ಲಾ ಪೂರ್ವ ತಯಾರಿ, ಸಿದ್ದತೆಗಳು ಏಕೆಂದರೆ, ಮಾಡಬೇಕಲ್ಲ ಎಂಬ ಕಾರಣಕ್ಕೆ ಮಾಡಿ ಕಡೆಗೆ ಅದು ಹತ್ತರಲ್ಲಿ ಹನ್ನೊಂದು ಎಂಬಂತಹ ಡಾಕ್ಯುಮೆಂಟರಿ ಆಗಬಾರದು ಎನ್ನುವದಷ್ಟೆ. ಓದುಗರನ್ನು ಮಂತ್ರಮುಗ್ಧಗೊಳಿಸಿ ಬೇರೆಯದೇ ಲೋಕಕ್ಕೆ ಕರೆದೊಯ್ಯುವ, ಅವರ ಕಥೆಯೊಂದನ್ನ ಓದಿದರೆ ಸಾಕು ಒಂದು ಬಗೆಯ ಹೊಸ ಉತ್ಸಾಹ ತುಂಬುವ ಬರವಣಿಗೆಯ ಶೈಲಿಯನ್ನು ಕರಗತ ಮಾಡಿಕೊಂಡಿದ್ದ ತೇಜಸ್ವಿಯಂತಹ ಅಕರ್ಷಕ ವ್ಯಕ್ತಿಯ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಆಕಳಿಕೆ ಬರಿಸುವಂತಹ ನೀರಸವಾದ, ಜಾಳುಜಾಳಾದ ಸಾಕ್ಷ್ಯಚಿತ್ರವನ್ನು ನಾನು ಅಂತಲ್ಲ ಬೇರೆ ಇನ್ನ್ಯಾರೇ ಮಾಡಿದರೂ ಅದು ಸ್ವತಃ ತೇಜಸ್ವಿಯ ವ್ಯಕ್ತಿತ್ವಕ್ಕೆ ಮಾಡುವ ಅವಮಾನ ಎಂದು ನಾನು ನಂಬಿಕೊಂಡಿದ್ದೆ. ಹಾಗಾಗಿ ನಮ್ಮ ಮುಂದೆ ಬೇರೆ ಆಯ್ಕೆಯೇ ಇರಲಿಲ್ಲ, ಡಾಕ್ಯುಮೆಂಟರಿಯನ್ನು ಅತ್ಯುತ್ತಮವಾಗಿ ರೂಪಿಸುವುದರ ಹೊರತಾಗಿ. ಹಾಗಾಗಿ ಇಷ್ಟೆಲ್ಲಾ ರಿಸರ್ಚು, ಅಧ್ಯಯನ ಬೇಕೆ ಬೇಕಿತ್ತು. ಹಾಗಾಗಿ ಸತತ ಎರಡು ತಿಂಗಳುಗಳ ಕಾಲ ಸಮಯ ಸಿಕ್ಕಾಗಲೆಲ್ಲಾ ಕೆಲಸ ಮಾಡಿ ಸಾಕ್ಷ್ಯಚಿತ್ರಕ್ಕೆ ಬೇಕಾಗಿದ್ದ ಪೂರ್ವತಯಾರಿಗಳನ್ನು ಮಾಡಿಕೊಂಡಿದ್ದೆ. (ಈ ಸಮಯದಲ್ಲಿ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಸಿನಿಮಾದ ಚಿತ್ರೀಕರಣ ಸಹ ನಡೆಯುತ್ತಿತ್ತು. ಹಾಗಾಗಿ ಬೆಳಿಗ್ಗಿನಿಂದ ಸಂಜೆಯವರೆಗೂ ಚಿತ್ರೀಕರಣದಲ್ಲಿ ಪಾಲ್ಗೊಂಡು ರಾತ್ರಿ ಸಾಕ್ಷ್ಯಚಿತ್ರಕ್ಕೆ ಬೇಕಾದ ಕೆಲಸ ಮಾಡುತ್ತಿದ್ದೆ).

 ಇಷ್ಟೆಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಷ್ಟರಲ್ಲಿ ಎರಡು ತಿಂಗಳು ಮುಗಿದಿತ್ತು. ಎರಡು ತಿಂಗಳ ಪೂರ್ವ ತಯಾರಿಯ ಈ ಅವಧಿಯಲ್ಲಿ ಆದ ಮತ್ತೊಂದು ಪ್ರಮುಖ ಬೆಳವಣಿಗೆ ಎಂದರೆ, ಸಾಕ್ಷ್ಯಚಿತ್ರಕ್ಕೆ ಬೇಕಾಗಿದ್ದ ಹಣಕಾಸಿನ ನೆರವು ದೊರೆತದ್ದು. ಈ ಸಾಕ್ಷ್ಯಚಿತ್ರಕ್ಕೆ ತಗುಲಬಹುದಾದ ಒಟ್ಟು ವೆಚ್ಚವನ್ನು ನಾನು, ಹೇಮಂತ್ ಇಬ್ಬರೂ ಕೂಡಿ ಲೆಕ್ಕಹಾಕಿ ಒಂದು ವಿವರಣಾತ್ಮಕ ಪಟ್ಟಿಯನ್ನು ಸಿದ್ದಪಡಿಸಿದ್ದೆವು. ಮುಂದಿನ ಒಂದೆರಡು ದಿನಗಳಲ್ಲಿ ಕೆಲವು ಸ್ನೇಹಿತರನ್ನು ತೇಜಸ್ವಿ ಕುರಿತಾದ ಈ ಸಾಕ್ಷ್ಯಚಿತ್ರಕ್ಕೆ ಹಣಕಾಸಿನ ಬೆಂಬಲ ಕೊಡಲು ಸಾಧ್ಯವೇ ಎಂದು ಕೇಳಿದೆವು. ಕೇಳಿದವರೆಲ್ಲರೂ “ತುಂಬಾ ಒಳ್ಳೆಯ ಅಲೋಚನೆ ಚೆನ್ನಾಗಿದೆ ಮಾಡಿ” ಎಂದು ಹುರಿದುಂಬಿಸುವ ಮಾತನಾಡಿದರಾದರು ಹಣಕಾಸಿನ ನೆರವು ನೀಡಲು ಯಾರು ಒಪ್ಪಿಕೊಳ್ಳಲಿಲ್ಲ. ಸ್ವಲ್ಪ ದಿನ ಈ ಯೋಚನೆಯಲ್ಲೇ ಇದ್ದೆ. ಒಂದು ದಿನ ನನ್ನ ಹಳೆಯ ಹಿತೈಷಿಯೊಬ್ಬರು ಸಿಕ್ಕು ಅವರೊಂದಿಗೆ ಮಾತನಾಡುತ್ತಿದ್ದಾಗ ಅವರು ಲೋಕಾಭಿರಾಮವಾಗಿ “ಎನ್ ಮಾಡ್ತಿದ್ದೀರಿ ಈಗ” ಎಂದು ಕೇಳಿದರು. ನಾನು ತೇಜಸ್ವಿ ಕುರಿತ ಸಾಕ್ಷ್ಯಚಿತ್ರ ಮಾಡಬೇಕೆಂದು ಓಡಾಡುತ್ತಿರುವುದಾಗಿ ಅವರಿಗೆ ಹೇಳಿದೆ. ಅವರು “ಒಳ್ಳೆ ಅಲೋಚನೆ ಕಣ್ರಿ, ಚೆನ್ನಾಗಿ ಮಾಡಿ. ನಾನು ಅವರ ಪುಸ್ತಕ ಕೆಲವು ಓದಿದ್ದೀನಿ. ಸಕತ್ತಾಗಿ ಬರಿತಾರಲ್ಲ ಅವರು ಎಂದರು. ನಾನು ಇದೇ ಒಳ್ಳೆ ಅವಕಾಶ ಬಿಡಬಾರದು ಆದ್ರೆ ಆಗ್ಲಿ ಹೋದ್ರೆ ಹೋಗ್ಲಿ ಎಂದುಕೊಂಡು ಒಂದು ಬಾಣ ಬಿಟ್ಟೆ,“ಸರ್ ಕೆಲಸ ಎಲ್ಲಾ ಚೆನ್ನಾಗೆ ಆಗ್ತಿದೆ. ಆದ್ರೆ ಮೈನ್ ಫ಼ೈನಾನ್ಸ್ ಪ್ರಾಬ್ಲಂ ಇದೆ” ಎಂದು. ಅವರು ತಕ್ಷಣ “ಯಾಕ್ರಿ ಪ್ರೊಡ್ಯುಸರ್ ಹಿಡಿದಿಲ್ವಾ ಇನ್ನು?” ಎಂದು ಪ್ರಶ್ನಿಸಿದರು. ನಾನು “ಇಲ್ಲ ಸರ್, ಟ್ರೈ ಮಾಡ್ತಾ ಇದ್ದೀವಿ. ಯಾಕೊ ಯಾರೂ ಸರಿಯಾಗಿ ರೆಸ್ಪಾನ್ಸ್ ಮಾಡ್ತಿಲ್ಲ” ಎಂದೆ. “ಹೌದೇನ್ರಿ? ನಾನು ನೀವ್ಯಾರಾದ್ರು ಪ್ರೊಡ್ಯುಸರ್ ಹಿಡಿದಿರ್ತೀರ ಅಂದ್ಕೊಂಡಿದ್ದೆ. ಸರಿ ಎಷ್ಟು ಬಜೆಟ್ಟು? ಎಂದರು. ನಾನು ಮನಸ್ಸಿನಲ್ಲೇ “ಓ!!! ನನ್ನ ಬಾಣ ಸರಿಯಾಗೆ

ಕೆಲಸ ಮಾಡ್ತಿದೆ”ಅಂದುಕೊಂಡು ತಕ್ಷಣ ಅವರಿಗೆ, ಬೇಕಾಗಿದ್ದ ಹಣಕಾಸಿನ ವಿವರಗಳನ್ನೆಲ್ಲಾ ಹೇಳಿದೆ. ಸ್ಕ್ರಿಪ್ಟು, ಬಡ್ಜೆಟ್ ಎಸ್ಟಿಮೇಶನ್ನು, ಇತರೆ ವಿವರಗಳಿದ್ದ ಫ಼ೈಲ್ ಅವರ ಕೈಗೆ ಕೊಟ್ಟೆ. ಅವರು ಅದನ್ನು ನಾಮಾಕಾವಸ್ತೆ ಎಂಬಂತೆ ನೋಡಿ, “ನೀವು ಮುಂದುವರೆಸ್ರಿ, ಇದಕ್ಕಾಗೊ ಖರ್ಚು ನಾನು ಕೊಡ್ತೀನಿ” ಎಂದು ಹೇಳಿ ಆ ಫ಼ೈಲನ್ನು ನನಗೇ ವಾಪಸ್ ಕೊಟ್ಟರು.

ದೊಡ್ಡದೊಂದು ಭಾರ ನನ್ನ ತಲೆಯ ಮೇಲಿಂದ ಇಳಿದಷ್ಟು ನೆಮ್ಮದಿ, ನಿರಾಳ ಆಯ್ತು ನನಗೆ ಆ ಕ್ಷಣದಲ್ಲಿ. ಅವರು ಹೆಚ್ಚೇನು ಪ್ರಶ್ನೆ ಮಾಡದೆ “ಓಳ್ಳೆ ಕೆಲಸ ಮಾಡೋಕೆ ಹೊರಟಿದ್ದೀರಿ, ಓಳ್ಳೆದಾಗುತ್ತೆ. ಚೆನ್ನಾಗಿ ಮಾಡಿ ಅಷ್ಟೆ” ಎಂದು ಹೇಳಿ ಅಡ್ವಾನ್ಸ್ ಎಂದು ಸ್ವಲ್ಪ ಹಣವನ್ನು ನನ್ನ ಕೈಗಿತ್ತರು. ನಾನು ಹೆಚ್ಚೇನು ಮಾತನಾಡದೆ “ಥ್ಯಾಂಕ್ಸ್ ಸರ್, ಇಮ್ಮಿಡಿಯಟ್ಟಾಗಿ ಕೆಲಸ ಶುರು ಮಾಡಿಸ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟು ಬಂದೆ.

ಅಲ್ಲಿಗೆ ಸಾಕ್ಷ್ಯಚಿತ್ರಕ್ಕೆ ತೊಡಕಾಗಿದ್ದ ಬಹುಮುಖ್ಯ ಸಮಸ್ಯೆಯೊಂದು ಸುಲಭವಾಗಿ ಪರಿಹಾರವಾದಂತಾಗಿತ್ತು. ಅಂದು ಅಷ್ಟು ಸುಲಭವಾಗಿ ಕೇವಲ ತೇಜಸ್ವಿ ಎಂಬ ಹೆಸರನ್ನು ಕೇಳಿಯೇ ಸಾಕ್ಷ್ಯಚಿತ್ರಕ್ಕೆ ಬೇಕಾಗಿದ್ದ ಹಣಕಾಸಿನ ನೆರವು ನೀಡಿದವರೇ ಉದ್ಯಮಿ, “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ನಿರ್ಮಾಪಕ ಜರಗನಹಳ್ಳಿ ಕಾಂತರಾಜುರವರು

. ಪುಂಗಿದಾಸನಪಾಶುಪತಾಸ್ತ್ರvs.ಮಾಯ್ಕಾರನ ಮೂಡಿಗೆರೆ”!

ಸಾಕ್ಷ್ಯಚಿತ್ರಕ್ಕೆ ಬೇಕಾಗಿದ್ದ ಹಣಕಾಸಿನ ನೆರವು ಸಿಕ್ಕ ನಂತರ ಕೆಲಸಗಳು ಚುರುಕಾಗಿ ಸಾಗತೊಡಗಿದವು. ಅಷ್ಟರಲ್ಲಾಗಲೇ ಸ್ಕ್ರಿಪ್ಟ್ ಕೂಡ ಒಂದು ಹಂತಕ್ಕೆ ಮುಗಿದಿತ್ತು. ಮುಂದೆ ಚಿತ್ರೀಕರಣಕ್ಕೆ ಹೋಗುವ ಮೊದಲು ತೇಜಸ್ವಿಯವರ ಪ್ರಮುಖ ಒಡನಾಡಿಗಳೊಂದಿಗೆ ಸಾಕ್ಷ್ಯಚಿತ್ರ ಮಾಡುತ್ತಿರುವ ಕುರಿತು ವಿಷಯ ತಿಳಿಸಬೇಕಿತ್ತು, ಅವರೊಂದಿಗೆ ವಿವರವಾಗಿ ಚರ್ಚಿಸಬೇಕಿತ್ತು. ನಾನು ನನ್ನ ಎರಡು ತಿಂಗಳ ಪೂರ್ವತಯಾರಿಯ ಸಮಯದಲ್ಲಿ ತೇಜಸ್ವಿ ಒಡನಾಡಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದೆ. ಈಗ ಆ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಮುಂದುವರೆಯಬೇಕೆಂದು ನಿರ್ಧರಿಸಿ ಅದಕ್ಕಾಗಿ ಆದಷ್ಟು ಬೇಗ ಮೂಡಿಗೆರೆಗೆ ಹೋಗಬೇಕೆಂದುಕೊಂಡು ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಯೋಚನೆಯಲ್ಲಿರಬೇಕಾದರೆ ಒಂದು ದಿನ ನನ್ನ ಗೆಳೆಯರೊಬ್ಬರು “ತೇಜಸ್ವಿಯವರ ಆಪ್ತ ಒಡನಾಡಿಯೊಬ್ಬರು ಬೆಂಗಳೂರಿನಲ್ಲೇ ಇದ್ದಾರೆ. ಅವರು ತೇಜಸ್ವಿಯನ್ನು ತುಂಬಾ ಹತ್ತಿರದಿಂದ ಕಂಡವರಂತೆ. ಅವರೊಂದಿಗೆ ಮಾತನಾಡಿ, ನಿಮಗೆ ಒಂದಷ್ಟು ವಿಷಯ ಸಿಕ್ಕಬಹುದು” ಎಂದು ಹೇಳಿ ಆ ವ್ಯಕ್ತಿಯ ನಂಬರ್ ಕೊಟ್ಟರು.

ಹುಡುಕುತ್ತಿರುವ ಬಳ್ಳಿ ಕಾಲಿಗೆ ಸಿಕ್ಕಷ್ಟು ಖುಷಿಯಾಗಿ ಆ ನಂಬರಿಗೆ ಫೋನ್ ಮಾಡಿದೆ. ಅತ್ತಲಿಂದ ಒಂದು ಗಡಸು ಧ್ವನಿ. ನಾನು ನನ್ನ ಪರಿಚಯ ಮಾಡಿಕೊಂಡ ನಂತರ ಆ ವ್ಯಕ್ತಿಗೆ ಸಾಕ್ಷ್ಯಚಿತ್ರ ಮಾಡುತ್ತಿರುವ ಕುರಿತು ಹೇಳಿ ನಿಮ್ಮೊಂದಿಗೆ ಮಾತನಾಡಬೇಕಾಗಿರುವುದಾಗಿ ಹೇಳಿದೆ. ಆತ ತನ್ನ ಕಛೇರಿಯ ವಿಳಾಸ ಕೊಟ್ಟು ಮಧ್ಯಾಹ್ನ ಊಟದ ನಂತರ ಬರಲು ಹೇಳಿದರು. ಸರಿಯಾಗಿ ೩ಗಂಟೆಗೆ ಆತನ ಮುಂದೆ ಕುಳಿತಿದ್ದೆ. ಪ್ರಾರಂಭದ ಔಪಚಾರಿಕ ಮಾತುಕತೆಗಳೆಲ್ಲ ಮುಗಿದ ಮೇಲೆ ಸಾಕ್ಷ್ಯಚಿತ್ರದ ಬಗ್ಗೆ ಹೇಳಿದೆ. ಆತ ಸ್ವಲ್ಪ ಕೆಮ್ಮಿ, ಸ್ವಲ್ಪ ಕ್ಯಾಕರಿಸಿ ಗಂಟಲು ಸರಿಪಡಿಸಿಕೊಂಡು

ಮಾತು ಪ್ರಾರಂಭಿಸಿದರು. ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ಸುಧೀರ್ಘವಾಗಿ ಅವರು ಮಾತನಾಡಿದರು, ಮಾತನಾಡಿದರು, ಮಾತನಾಡುತ್ತಲೇ ಇದ್ದರು!! ಆದರೆ ಯಾವುದು ತೇಜಸ್ವಿಗೆ ಸಂಬಂಧಪಟ್ಟಿರಲಿಲ್ಲ ಅಷ್ಟೆ!!!

ಆ ಮಹಾನುಭಾವ ಸುಮಾರು ೫ ಗಂಟೆಗಳ ಕಾಲ ಆತನ ಬಗ್ಗೆಯೇ ಹರಿಕತೆ ಮಾಡಿಕೊಂಡನೇ ಹೊರತು ತೇಜಸ್ವಿ ಬಗ್ಗೆ ಅಪ್ಪಿತಪ್ಪಿಯೂ ಮಾತನಾಡಲಿಲ್ಲ. ವಿಷಯದ ಪ್ರಾರಂಭದಲ್ಲಿ ತೇಜಸ್ವಿ ಕುರಿತು ಮಾತನಾಡುವವನಂತೆ ಮಾತು ಪ್ರಾರಂಭಿಸುತ್ತಿದ್ದನಾದರೂ ನಂತರ ತನ್ನ ಮಾರ್ಗ ಬದಲಿಸಿ ವಿಷಯವನ್ನು ಸ್ವಯಂಪುಂಗಿ ಊದಿಕೊಳ್ಳುವುದಕ್ಕೆ ತಂದು ಕನೆಕ್ಟ್ ಮಾಡಿಬಿಡುವಷ್ಟು ದೈತ್ಯ ಪ್ರತಿಭೆ ಅವನದ್ದಾಗಿತ್ತು.

ಅವನ ಸಾಧನೆಗಳು(?), ಅವನ ರೋಚಕ(?) ಪ್ರೇಮ ಪ್ರಕರಣ, ಅವನ ಮಗನಿಗೆ(?)

ಹೆಸರಿಟ್ಟಿದ್ದರ ಹಿಂದಿನ ಕತೆ, ಲಡಾಖ್ ಗೆ ಕೈಗೊಂಡಿದ್ದ ಯಾತ್ರೆ, ಬಿಸಾಡಿದರೆ ಕಸದ ಬುಟ್ಟಿಯು ಹೇಸಿಕೊಳ್ಳುವಂತಹ ಅವನು ತೆಗೆದ ಫೋಟೊಗಳು, ಇಂತಹ ಕೆಲಸಕ್ಕೆ ಬಾರದ ಹತ್ತಾರು ವಿಷಯಗಳ ಬಗ್ಗೆ ಒಂದೇ ಸಮ ಕೊರೆದ.

ಇನ್ನು ಸ್ವಲ್ಪ ಹೊತ್ತು ಹೀಗೆ ಇವನ ಎದುರಿಗೆ ಕೂತಿದ್ದರೆ ಎಲ್ಲಿ ನಾನೂ ಸಹ ಮಾನಸಿಕ ರೋಗಿಯಾಗಿಬಿಡುತ್ತೇನೋ ಎಂದು ಹೆದರಿ ಹೇಗೊ ನೆಪ ಹೇಳಿ ಅವನ ತುತ್ತೂರಿಯಿಂದ ತಪ್ಪಿಸಿಕೊಂಡು ಅಲ್ಲಿಂದ ಜಾಗ ಮಾಡಿದೆ. ಆತನಿಗೆ ಮಾತ್ರ ತನ್ನ ಬಗ್ಗೆ ಹೇಳಿಕೊಳ್ಳುವ ಉತ್ಸಾಹ ಮಾತ್ರ ಒಂದೇ ಒಂದು ದೇವಕಣದಷ್ಟು ಕಡಿಮೆಯಾಗಿರಲಿಲ್ಲ. ನಾನು ಎದ್ದು ಹೊರಡುವಾಗ ಬಾಗಿಲವರೆಗೆ ಬಂದ ಆವರು ” Free ಮಾಡಿಕೊಂಡು ಬನ್ನಿ ಪರಮೇಶ್ವರ್. ನಿಧಾನವಾಗಿ ಮಾತಾಡೋಣ. ತುಂಬಾ ಇದೆ ಹೇಳೋಕೆ” ಎಂದು ಪಾಶುಪತಾಸ್ತ್ರ ತರಹದೊಂದು ಅಸ್ತ್ರವೊಂದನ್ನು ಕಡೆಯದಾಗಿ ನನ್ನ ಮೇಲೆ ಪ್ರಯೋಗಿಸಿದರು. ಡಿಸ್ಕವರಿ ಚಾನೆಲ್ ನಲ್ಲಿ ಅಟ್ಟಿಸಿಕೊಂಡು ಬರುತ್ತಿರುವ ಸಿಂಹದಿಂದ ಪ್ರಾಣ ಉಳಿಸಿಕೊಳ್ಳಲು ತಪ್ಪಿಸಿಕೊಂಡು ಓಡುತ್ತಿರುವ ಜಿಂಕೆಯಂತೆ ಹೆದರಿ ಆತನ ಕಡೆ ತಿರುಗಿಯೂ ನೋಡದೆ ಅಲ್ಲಿಂದ ಕಾಲ್ಕಿತ್ತೆ. ಆ ಕಡೆ ಹೋಗುವ ಘೋರಾಪರಾಧ ನಾನು ಮತ್ತೆ ಮಾಡಲಿಲ್ಲ.(ಸಾಕ್ಷ್ಯಚಿತ್ರ ಸಂಪೂರ್ಣವಾಗಿ ಮುಗಿದ ನಂತರ ಅದರ ಡಿವಿಡಿಯೊಂದನ್ನು ಆತನಿಗೆ ಕಳಿಸಿಕೊಟ್ಟಿದೆ. ಎರಡು ದಿನಗಳ ನಂತರ ಆತ ನನಗೆ ಫೋನ್ ಮಾಡಿ “ಈ ಸಾಕ್ಷ್ಯಚಿತ್ರ ನೋಡಿ ತಾವು ತುಂಬಾ ಡಿಸಪಾಯಿಂಟ್ ಆಗಿರುವುದಾಗಿ, ಸಾಕ್ಷ್ಯಚಿತ್ರದ ೬೦ ಭಾಗ ಕತ್ತರಿಸಿದರೆ ನೋಡಬಹುದೆಂದು” ತಿಳಿಸಿದರು. ನಕ್ಕು ಸುಮ್ಮನಾಗಿದ್ದೆ)ಈ ಘಟನೆಯಿಂದ ನಾನು ಒಂದೊಳ್ಳೆ ಪಾಠ ಕಲಿತೆ. ತೇಜಸ್ವಿಯ ಒಡನಾಡಿಗಳು ಎಂದು ಹೇಳಿಕೊಳ್ಳುವವರ ಬಗ್ಗೆ ಎಚ್ಚರವಹಿಸಲು ಪ್ರಾರಂಭಿಸಿದೆ. ಅವರ ಮಾತುಗಳಲ್ಲಿನ ಅಸಲಿತನವನ್ನು ಗುರುತಿಸುವುದನ್ನು ಕಲಿತೆ.(ಮುಂದೆ ತೇಜಸ್ವಿಯ ಒಡನಾಡಿಗಳು ಎಂದು ಬಹಳ ಜನ ಹೇಳಿಕೊಂಡು ನನ್ನನ್ನು, ನಮ್ಮ ತಂಡವನ್ನು ಭೇಟಿಯಾಗಿದ್ದರು. ಅವರೊಂದಿಗೆ ಒಂದೆರಡು ನಿಮಿಷ ಮಾತನಾಡುವಷ್ಟರಲ್ಲೆ ಅವರ ಹಾಗು ತೇಜಸ್ವಿಯವರ ಒಡನಾಟದ ಆಳ ಎಷ್ಟಿರಬಹುದು ಎಂದು ನಮಗೆ ಅಂದಾಜಾಗಿಬಿಡುತ್ತಿತ್ತು. ಅವರನೆಲ್ಲಾ ಸಾಕ್ಷ್ಯಚಿತ್ರದಲ್ಲಿ ಸೇರಿಸಿದ್ದರೆ ಇದೊಂದು ೧೦೦ ಗಂಟೆಗಳ ಸಾಕ್ಷ್ಯಚಿತ್ರವಾಗಿರುತ್ತಿತ್ತು)

ಇದಾದ ಕೆಲವು ದಿನ ಸಿನಿಮಾ ಚಿತ್ರೀಕರಣವಿತ್ತಾದ್ದರಿಂದ ಸಾಕ್ಷ್ಯಚಿತ್ರದ ಬಗ್ಗೆ ಸಮಯ ಕೊಡಲಾಗಿರಲಿಲ್ಲ. ಒಂದು ವಾರದ ನಂತರ ಚಿತ್ರೀಕರಣ ಮುಗಿದು ಸ್ವಲ್ಪ ಸಮಯ ಸಿಕ್ಕಿತ್ತು. ಆಗ ಸುಮ್ಮನೆ ಎಂಬಂತೆ ಗಾಂಧಿಬಜಾರಿನ ಅಂಕಿತ ಪುಸ್ತಕದಂಗಡಿಗೆ ಹೋಗಿ ಬಂದಿದ್ದ ಹೊಸ ಪುಸ್ತಕಗಳನ್ನು ನೋಡುತ್ತಿದ್ದೆ. ಅಲ್ಲಿ ಹೊಸದಾಗಿ ಪ್ರಕಟವಾಗಿದ್ದ ಪುಸ್ತಕಗಳಲ್ಲಿ ಒಂದು ಪುಸ್ತಕ ನನ್ನನ್ನು ತುಂಬಾ ಆಕರ್ಷಿಸಿತು. ಕಾರಣ ಆ ಪುಸ್ತಕದ ಮೇಲಿದ್ದ ತೇಜಸ್ವಿಯ ಫೋಟೋ! ನನಗೆ ಆಶ್ಚರ್ಯವಾಯಿತು. ಮನಸ್ಸು ಏನನ್ನು ಬಯಸುತ್ತಿರುತ್ತದೊ ಅದನ್ನೇ ಕಣ್ಣು ಹುಡುಕುತ್ತಿರುತ್ತದೆ ಎನ್ನುವ ಹಾಗೆ ಉದ್ದೇಶವೇ ಇಲ್ಲದೆ ಪುಸ್ತಕದಂಗಡಿಗೆ ಹೋಗಿದ್ದ ನನಗೆ ತೇಜಸ್ವಿಯ ಪುಸ್ತಕವೊಂದು ಸಿಕ್ಕಿತು. ಅದು ತೇಜಸ್ವಿಯೊಂದಿಗಿನ ಒಡನಾಟದ ಬಗ್ಗೆ ಅವರ ಒಡನಾಡಿಯೊಬ್ಬ ಬರೆದುಕೊಂಡಿದ್ದ ಹಲವು ಸ್ವಾರಸ್ಯಕರ ಘಟನೆಗಳನೊಳಗೊಂಡಿದ್ದ ಪುಸ್ತಕ. ಆ ಪುಸ್ತಕವನ್ನು ತಂದುಕೊಂಡು

ಒಂದೇ ಸಿಟ್ಟಿಂಗಿನಲ್ಲಿ ಕೂತು ಓದಿ ಮುಗಿಸಿದೆ. ಆ ಪುಸ್ತಕದಲ್ಲಿ ತೇಜಸ್ವಿಯವರೊಂದಿಗಿನ ಒಡನಾಟದ ನೆನಪುಗಳನ್ನು ಅವರ ಒಡನಾಡಿಯೊಬ್ಬ ತುಂಬಾ ಸರಳವಾಗಿ, ಅಷ್ಟೇ ನೇರವಾಗಿ ಬರೆದುಕೊಂಡಿದ್ದರು. ಆ ಪುಸ್ತಕದಲ್ಲೇ ಲೇಖಕರ ಹೆಸರಿನ ಜೊತೆಗೆ ಮೂಡಿಗೆರೆಯ ಅವರ ವಿಳಾಸ ಮತ್ತು ಅವರ ನಂಬರ್ ಇತ್ತು. ಹಿಂದೆ ಮುಂದೆ ಯೋಚನೆ ಮಾಡದೆ ತಕ್ಷಣ ಆ ನಂಬರಿಗೆ ಫೋನ್ ಮಾಡಿದೆ.ಆ ಕಡೆಯಿಂದ ಕರೆ ಸ್ವೀಕರಿಸಿದ ವ್ಯಕ್ತಿಯೊಂದಿಗೆ ಸುಮಾರು ೧೦ ನಿಮಿಷ ಮಾತನಾಡಿದೆ. ಕಡೆಯಲ್ಲಿ “ಈ ಸಾಕ್ಷ್ಯಚಿತ್ರದ ಪೂರ್ವಸಿದ್ಧತೆಗಳಿಗಾಗಿ ಮೂಡಿಗೆರೆಗೆ ಬರಬೇಕೆಂದಿದ್ದೇವೆ” ಎಂದು ಹೇಳಿದೆ. ಅವರು “ಹಾಗಾದ್ರೆ ತಡ ಮಾಡಬೇಡಿ. ಆದಷ್ಟು ಬೇಗ ಬನ್ನಿ. ನನ್ನಿಂದ ಏನಾಗುತ್ತೊ ಮಾಡ್ತೀನಿ. ಇಂತಹ ಕೆಲಸ ತುಂಬಾ ಹಿಂದೆನೇ ಆಗಬೇಕಿತ್ತು” ಎಂಬ ಪ್ರೋತ್ಸಾಹದ ಮಾತುಗಳನ್ನಾಡಿದರು.ಅಚಾನಕ್ಕಾಗಿ ಪರಿಚಯವಾಗಿ, ಸಾಕ್ಷ್ಯಚಿತ್ರ ರೂಪಿಸುವ ಹಾದಿಯಲ್ಲಿ ತನ್ನಿಂದ ಸಾಧ್ಯವಿದ್ದ ಸಹಾಯಗಳನ್ನೆಲ್ಲಾ ಮಾಡಿ, ಈಗ ನನ್ನ ಆತ್ಮೀಯರೇ ಆಗಿ ಹೋಗಿರುವ ಮೂಡಿಗೆರೆಯ ಆ ಸಹೃದಯಿ ಗೆಳೆಯನ ಹೆಸರು ಧನಂಜಯ ಜೀವಾಳ.

(ಇಡೀ ಸಾಕ್ಷ್ಯಚಿತ್ರ ರೂಪಿಸುವ ಹಾದಿಯಲ್ಲಿ ಮೂಡಿಗೆರೆಯ ಈ ನನ್ನ ಗೆಳೆಯ ನಮಗೆ ಮಾಡಿದ ಸಹಾಯಗಳನ್ನು ಯಾವತ್ತಿಗೂ ಮರೆಯೋದಕ್ಕೆ ಸಾಧ್ಯವಿಲ್ಲ)

ಮೂಡಿಗೆರೆಯ ಆ ಗೆಳೆಯನ ಮಾತುಗಳು ನಮ್ಮನ್ನು ಮತ್ತಷ್ಟು ಉತ್ಸಾಹಿತರನ್ನಾಗಿ ಮಾಡಿದವು. ಆ ಕ್ಷಣವೇ ನಿರ್ಧರಿಸಿದೆ, ನಾಳೆಯೇ ಮೂಡಿಗೆರೆಯ ದಾರಿ ಹಿಡಿಯಬೇಕೆಂದು. ಅವತ್ತು ಗುರುವಾರ. ಅಂದರೆ ಮೂಡಿಗೆರೆಯ ನಮ್ಮ ಪ್ರಯಾಣ ಶುಕ್ರವಾರ ಪ್ರಾರಂಭವಾಗುವುದಿತ್ತು. ತಕ್ಷಣ ಹೇಮಂತನಿಗೆ ಫೋನ್ ಮಾಡಿ “ನಾಳೆಯೇ ಮೂಡಿಗೆರೆಗೆ ಹೊರಡುತ್ತಿರುವುದಾಗಿ ಅದಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು” ಹೇಳಿದೆ. ಅವನಿಗೆ ಆಶ್ಚರ್ಯವಾಗಿತ್ತು  “ನಾಳೆಯೇ ಮೂಡಿಗೆರೆಗೆ ಹೋಗಬೇಕು” ಎಂಬ ನಿರ್ಧಾರ ಕೇಳಿ. ಆಫ಼ೀಸಿನಲ್ಲಿ ರಜೆ ಸಿಗುವುದು ಕಷ್ಟವೆಂದ. (ಆಗ ಹೇಮಂತ ಹೊರಗುತ್ತಿಗೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ). “ಕೆಲಸ ಮುಗಿಸಿ ಭಾನುವಾರ ರಾತ್ರಿ ವಾಪಸ್ ಬಂದು ಬಿಡೋಣ” ಎಂದೆ. ಅದಕ್ಕೆ ಸಂಬಂಧಪಟ್ಟ ಹಾಗೆ ಪ್ರಶ್ನೆಗಳ ಸುರಿಮಳೆಗೈದ. ಉತ್ತರ ಸಿಕ್ಕಿತೊ ಬಿಟ್ಟಿತೊ ಅಂತು ನನ್ನ ಜೊತೆ ನಾಳೆ ಮೂಡಿಗೆರೆಗೆ ಬರಲು ಒಪ್ಪಿದ. ಎಲ್ಲ ಮುಗಿದು ಮನಸ್ಸಿನಲ್ಲಿ ಮೂಡಿಗೆರೆಯನ್ನೇ ಧ್ಯಾನಿಸುತ್ತಾ ನನ್ನ ರೂಮಿಗೆ ಬಂದೆ. ಅಂದು ಬೆಳಗಿನಜಾವದವರೆಗು ನಿದ್ರೆ ನನ್ನ ಬಳಿ ಸುಳಿಯಲಿಲ್ಲ. ಮನಸ್ಸಿನ ತುಂಬಾ ಮೂಡಿಗೆರೆಹಾಗೂ ತೇಜಸ್ವಿ ಎಂಬಮಾಂತ್ರಿಕಹೆಸರುಗಳ ಕಚಗುಳಿಯಾಟ. ಕೊನೆಗೆ ತೇಜಸ್ವಿಯೆಂಬ ಮಾಯ್ಕಾರನ ಮೂಡಿಗೆರೆಯನ್ನು ಯಾವಾಗ ನೋಡುತ್ತೇನೊ ಎಂಬ ಕಾತರ, ಚಡಪಡಿಕೆಯ ಮಧ್ಯೆ ಯಾವಾಗ ಕಣ್ಣಿಗೆ ನಿದ್ರೆ ಹತ್ತಿತೊ ತಿಳಿಯಲಿಲ್ಲ.  ಕಣ್ಬಿಟ್ಟಾಗ ಬೆಳಿಗ್ಗೆ ೧೦ ಗಂಟೆ!!!…

ಮುಂದುವರೆಯುವುದು…

1935896_813503098761424_3085301655775122184_n


 ಪರಮೇಶ್ವರ.ಕೆ

ಬೆಂಗಳೂರು